ರಿಯಾದ್: ಸೌದಿ ಅರೇಬಿಯಾದ(Saudi Arabia) ರಾಜಧಾನಿ ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Riyadhs international airport) ಶನಿವಾರ ಭಾರೀ ಸ್ಫೋಟ(Loud Blast) ಸಂಭವಿಸಿದ್ದು, ಇಡೀ ಟರ್ಮಿನಲ್ನಲ್ಲಿ ತಲ್ಲಣ ಮೂಡಿಸಿದೆ. ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ವಿಮಾನ ನಿಲ್ದಾಣಕ್ಕೆ(Airport) ಹತ್ತಾರು ತುರ್ತು ಆಂಬುಲೆನ್ಸ್ಗಳು ದೌಡಾಯಿಸಿವೆ.
ಒಂದೇ ವಾರದಲ್ಲಿ ಮೂರನೇ ದಾಳಿ?
ಯೆಮೆನ್ನ ಹೌತಿ ಬಂಡುಕೋರರು ಸೌದಿ ನೆಲೆಗಳ ಮೇಲೆ ನಡೆಸುತ್ತಿರುವ ಕ್ಷಿಪಣಿ ಪ್ರಹಾರ ತೀವ್ರಗೊಂಡಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಪ್ರಸಕ್ತ ವಾರದಲ್ಲೇ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆದ ಹಿಂದಿನ ಎರಡು ದಾಳಿಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡು, ಹಲವಾರು ಮಂದಿ ಗಾಯಗೊಂಡಿದ್ದರು ಹಾಗೂ ವಾಣಿಜ್ಯ ವಿಮಾನವೊಂದು ಜಖಂಗೊಂಡಿತ್ತು. ಸದ್ಯದ ಸ್ಫೋಟದ ಕುರಿತು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ಹಾಗೂ ಸರ್ಕಾರದ ವಕ್ತಾರರು ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಹೌತಿಗಳ ದಾಳಿಯ ಶಂಕೆ ವ್ಯಕ್ತವಾಗಿದೆ.
ಸಂಪೂರ್ಣ ವಾಯು ಸಂಚಾರ ಅಸ್ತವ್ಯಸ್ತ
ಘಟನೆಯ ಬೆನ್ನಲ್ಲೇ ರಿಯಾದ್ಗೆ ಆಗಮಿಸಬೇಕಿದ್ದ ಹಾಗೂ ನಿರ್ಗಮಿಸಬೇಕಿದ್ದ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಅಥವಾ ಪಕ್ಕದ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ವಿಮಾನ ಸಂಚಾರ ನಿಗಾ ಜಾಲ ‘ಫ್ಲೈಟ್ರಾಡಾರ್ 24’ ಪ್ರಕಾರ, ರಿಯಾದ್ ಆಗಸದಲ್ಲಿ ಕೇವಲ ಕಣ್ಗಾವಲು ಹೆಲಿಕಾಪ್ಟರ್ ಮಾತ್ರ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ. ಇತ್ತೀಹಾದ್ ಹಾಗೂ ಕತಾರ್ ಏರ್ವೇಸ್ ಸೋಮವಾರದವರೆಗಿನ ತನ್ನ ಎಲ್ಲಾ ಸೇವೆಗಳನ್ನು ರದ್ದುಪಡಿಸಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಜಾಗತಿಕ ಶೃಂಗಸಭೆಗಳಿಗೆ ಭದ್ರತಾ ಸವಾಲು
ವಿಶ್ವದ ಗಮನ ಸೆಳೆದಿರುವ ಪ್ರಮುಖ ಇಂಧನ ಹಾಗೂ ಜಾಗತಿಕ ಹೂಡಿಕೆ ಸಮಾವೇಶಗಳು ಕೆಲವೇ ದಿನಗಳಲ್ಲಿ ರಿಯಾದ್ನಲ್ಲಿ ಆಯೋಜನೆಗೊಳ್ಳಲಿರುವ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಭದ್ರತಾ ಆತಂಕವನ್ನು ಹೆಚ್ಚಿಸಿದೆ. ಆದರೆ, ನಿಗದಿತ ಸಮ್ಮೇಳನಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸೌದಿ ಬೆಂಬಲಿತ ಪಡೆಗಳು ಯೆಮೆನ್ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಬೆನ್ನಲ್ಲೇ, ಸೌದಿ ವಾಯುಪ್ರದೇಶವನ್ನು ಯುದ್ಧ ವಲಯವೆಂದು ಘೋಷಿಸಿದ್ದ ಹೌತಿಗಳು ಪ್ರಯಾಣಿಕ ವಿಮಾನಗಳಿಗೂ ಎಚ್ಚರಿಕೆ ನೀಡಿದ್ದರು.




