ಬ್ಯಾಕ್ ಲಾಗ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಗುಡ್ ನ್ಯೂಸ್

ಬೆಂಗಳೂರು: ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ‌ನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು‌.

ಇಂದು ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ವಿವಿದ ದಲಿತಪರ ಸಂಘಟನೆಗಳ‌ ಮುಖಂಡರೊಂದಿಗೆ ಸಭೆ ನಡೆಸಿ, ಸುದೀರ್ಘವಾಗಿ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ನಮ್ಮ ಸರ್ಕಾರ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕಾನೂನಾತ್ಮಕವಾಗಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾತಿ ಸಿಗುತ್ತದೆ. ಇದಲ್ಲದೆ, ನಿಗದಿ ಮಾಡಿದ ಹುದ್ದೆಗಳನ್ನು ತುಂಬಿಲ್ಲ. ಆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ವಿಶ್ವವಿದ್ಯಾಲಯ ಮತ್ತು ಪ್ರಮುಖವಾದ ಇಲಾಖೆಗಳಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದು ಡಿಸಿಎಂ‌‌ ಜಿ.ಪರಮೇಶ್ವರ ಅವರು ಹೇಳಿದರು‌.

ಪಿಟಿಸಿಎಲ್ ಕಾಯ್ದೆಗೆ ಬಹಳ ವರ್ಷಗಳ ನಂತರ ತಿದ್ದುಪಡಿ ತರಲಾಗಿದೆ. ಪ್ರಾವಿಷನ್ ಡಿ ತೆಗೆಯಬೇಕು ಎಂದು ಒತ್ತಾಯ ಮಾಡಿದ್ದನ್ನು ನಮ್ಮ ಸರ್ಕಾರ ತೆಗೆದಿದೆ. ಆದರೂ ಕೂಡ ಬಹಳಷ್ಟು ಅನುಷ್ಟಾನ ಆಗುವುದರಲ್ಲಿ ವಿಳಂಬ ಆಗುತ್ತಿದೆ ಮತ್ತು ಸರಿಯಾದ ರೀತಿಯಲ್ಲಿ ಅನುಷ್ಟಾನ ಆಗುತ್ತಿಲ್ಲ‌ ಎಂದು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ತೀರ್ಮಾನವನ್ನ ಸರ್ಕಾರದಲ್ಲಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ‌ ಅನುಷ್ಟಾನದಲ್ಲಿ ಹೆಚ್ಚಿನಂಶ ದಲಿತ ಸಮುದಾಯಕ್ಕೆ ಅನುಕೂಲ ಆಗುತ್ತಿಲ್ಲ ಎಂಬುದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು, ಯಾವ ಜಿಲ್ಲೆ, ಯಾವ ತಾಲ್ಲೂಕಿನಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ಅನ್ಯಾಯವಾಗಿದೆ. ಅವರಿಗೆ ಈ ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಎಂಬುದರ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಗ್ಯಾರಂಟಿ ಯೋಜನೆಯಲ್ಲಿ ದಲಿತ ಸಮುದಾಯದ ಹೆಣ್ಣುಮಕ್ಕಳನ್ನು ಕೈಬಿಟ್ಟಿದ್ದಾರೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಸ್ಕಾಲರ್ ‌ಶಿಪ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಅಲ್ಲದೆ, ಅದು ಸಾಕಾಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ‌ ನಡೆಸಲಾಗುವುದು.‌ ಪೋಸ್ಟ್ ಮೆಟ್ರಿಕ್‌ ವಿದ್ಯಾರ್ಥಿಗಳಿಗೆ ರೂ. 1800 ಸ್ಕಾಲರ್‌ಶಿಪ್ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ₹3000 ಖರ್ಚಾಗುತ್ತಿದೆ. ಹೇಗೆ ನಿಭಾಯಿಸಬೇಕು ಎಂಬ ಪ್ರಶ್ನೆ ಬಂದಿದೆ. ಸರ್ಕಾರ ನೀಡುವ ಸ್ಕಾಲರ್‌ಶಿಪ್ ಸಾಕಾಗುತ್ತಿಲ್ಲ‌ ಎಂಬುದನ್ನು ತಿಳಿಸಿದ್ದಾರೆ. ಈ ಕುರಿತಂತೆ ಸಿಎಂ ಅವರೊಂದಿಗೆ ಚರ್ಚಿಸಲಾಗುವುದು‌. ಮುಂದಿನ ಬಜೆಟ್‌ನಲ್ಲಿ ಸ್ಕಾಲರ್‌ಶಿಪ್ ಹಣವನ್ನು ಯಾವ ರೀತಿ ಹೆಚ್ಚಿಸಬೇಕು ಎಂಬ ತೀರ್ಮಾನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಅರಣ್ಯ ಅಧಿಕಾರಿಗಳು ಅಲೆಮಾರಿ ಮತ್ತು ಆದಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಅನಗತ್ಯವಾಗಿ ತೆರವುಗೊಳಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್‌ಸಿಪಿ, ಟಿಎಸ್‌ಪಿ ಬೇರೆಬೇರೆ ಇಲಾಖೆಗೆ ನೀಡಲಾಗಿದೆ. ಹಿಂದೆ ಇದ್ದ ಏಕಗವಾಕ್ಷಿ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ. ಸಮಾಜ ಖ್ಯಾಣ ಇಲಾಖೆಗೆ ಜವಾಬ್ದಾರಿ ನೀಡಬೇಕು ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಬೇರೆಬೇರೆ ಇಲಾಖೆಗಳಿಗೆ ನೀಡಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ ಎಂದರು.

ಕೆಐಎಡಿಬಿ ಭೂಮಿ ಹಂಚಿಕೆಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಸರಿಯಾಗಿ ಭೂಮಿ ಹಂಚಿಕೆಯಾಗುತ್ತಿಲ್ಲ. ಲೇಔಟ್‌ಗಳಲ್ಲಿ ದಲಿತರಿಗೆ ಅವಕಾಶ ಆಗುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದಾರೆ. ಇದನ್ನು ಸರಿಪಡಿಸಲಾಗುವುದು. ಕೆಎಸ್‌ಎಫ್‌ಸಿ ಕೈಗಾರಿಕೆಗೆ ಸಾಲ ನೀಡುವುದನ್ನು ನಿಲ್ಲಿಸಲಾಗಿದೆ. ಇದನದನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಎಸ್‌ಐಟಿ ರಚನೆ:

ಆರ್ಟ್ ಆಫ್ ಲೀವಿಂಗ್‌‌ನ ಶ್ರೀ ರವಿಶಂಕರ್ ಗುರೂಜಿ ರವರ ಅಧೀನದಲ್ಲಿ 270 ಎಕರೆ ಭೂಮಿ ಇದೆ. ಅದರಲ್ಲಿ 150 ಎಕರೆ ಭೂಮಿ ಎಸ್‌ಸಿ, ಎಸ್‌ಟಿ ಜನರಿಗೆ ಸೇರಿದ ಭೂಮಿ ಆಗಿದೆ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿರು. ಈ ಬಗ್ಗೆ ಹಿಂದೆಯೂ ಅನೇಕ ದೂರುಗಳು ಬಂದಿದ್ದವು. ಆ ದೂರುಗಳನ್ನು ಆಧರಿಸಿ ಪರಿಶೀಲಿಸಲು, ಕಂದಾಯ ಇಲಾಖೆಯಲ್ಲಿ ಎಸ್‌ಐಟಿ ರಚಿಸಲಾಗಿದೆ. ಎಸ್‌ಸಿ, ಎಸ್‌ಟಿಗೆ ಸೇರಿದ 150 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬುದನ್ನು ಎಸ್‌ಐಟಿ ಪರಿಶೀಲನೆ ಮಾಡಲಿದೆ. ಕಂದಾಯ ಇಲಾಖೆಯ ಬೆಂಗಳೂರು ವಿಭಾಗ ಆಯುಕ್ತರಾದ ಆದಿತ್ಯ ಆಮ್ಲ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಎಸ್‌ಐಟಿ ತನಿಖೆ ನಡೆಯಲಿದೆ‌ ಎಂದು ಮಾಹಿತಿ ನೀಡಿದರು.

ವಿದೇಶವ್ಯಾಸಂಗ ವಿದ್ಯಾರ್ಥಿ ವೇತನ ಕಡಿಮೆ ಇದೆ. ಆ ದೇಶದ ವಿಶ್ವವಿದ್ಯಾಲಯದಲ್ಲಿ ಪಾವತಿಸಿಕೊಳ್ಳಲಾಗುವ ಶುಲ್ಕವನ್ನು ನೀಡಲು ಕ್ರಮ ವಹಿಸಲಾಗುವುದು. ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ನೇರ ನೇಮಕಾತಿ ಮಾಡಲಾಗುವುದು. ಆದಿವಾಸಿ ಸಮುದಾಯದ 12 ಜನ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಅವರಿಗೆ ಕೆಲಸ ಸಿಕ್ಕಿಲ್ಲ. ವಿಶೇಷ ನೇಮಕಾತಿ ಮೂಲಕ ಉದ್ಯೋಗ ಕಲ್ಪಿಸಲು ಪರಿಶೀಲಿಸಲಾಗುವುದು‌ ಎಂದು ತಿಳಿಸಿದರು.

ಆರ್‌ಟಿಇ ಸರಿಯಾಗಿ ಅನುಷ್ಟಾನ ಆಗುತ್ತಿಲ್ಲ. 9 ಮತ್ತು 10 ನೇ ತರಗತಿ ಆರ್‌ಟಿಇಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ, ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು‌.

ಕಳೆದ ವರ್ಷ ಅಂಗವಿಕಲರ ಕ್ರಿಕೆಟ್‌ನಲ್ಲಿ ವರ್ಲ್ಡ್‌ ಚಾಂಪಿಯನ್ ಆಗಿರುವ ನೀಲವ್ವ ನಿಂಗವ್ವ ಹರಿಜನ ಅವರು ಶೆಡ್‌ನಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕಳೆದ ವರ್ಷ 5 ಲಕ್ಷ ರೂ. ನೀಡಿದೆ. ಅವರಿಗೆ ಹೌಸಿಂಗ್ ಬೋರ್ಡ್‌ನಿಂದ ಶೀಘ್ರ ನಿವೇಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆರ್ಟ್ ಆಫ್‌ ಲೀವಿಂಗ್ ಅಧೀನದಲ್ಲಿದೆ ಎನ್ನಲಾದ ಎಸ್‌ಸಿ, ಎಸ್‌ಟಿ ಸಮುದಾಯದ 150 ಎಕರೆ ಭೂಮಿ ಬಗ್ಗೆ ಎಸ್‌ಐಟಿಯವರು ಪರಿಶೀಲಿಸಲಿದ್ದಾರೆ. ತದನಂತರ ಸತ್ಯಾಂಶ‌ ಏನೆಂಬುದು ಗೊತ್ತಾಗಲಿದೆ. ಇದರಲ್ಲಿ ಯಾರು ಸರಿ ಇಲ್ಲ, ಯಾರು ಸರಿ ಇದ್ದಾರೆ ಎಂಬುದು ಹೊರಬರುತ್ತದೆ. ಸಭೆಯಲ್ಲಿ ಪ್ರಸ್ತಾಪ ಆಯಿತು.‌ ಕಾಕತಾಳೀಯ ಎಂಬಂತೆ ಇವತ್ತು ಎಸ್‌ಐಟಿ ರಚಿಸಿರುವ ಬಗ್ಗೆ ಆದೇಶವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜಾತಿ ಪ್ರಮಾಣಪತ್ರ ನೀಡಲು 21 ದಿನ ಸಮಯ ನೀಡಲಾಗಿದೆ. ಇದು ವಿಳಂಬವಾಗುವುದಿಲ್ಲ. ಜಾತಿ ಪ್ರಮಾಣ ಪತ್ರ ನೀಡಿದರೆ, ಉದ್ಯೋಗ, ಶಿಕ್ಷಣಕ್ಕೆ ಬಳಸಲು ಅನುಕೂಲವಾಗಲಿದೆ. ಬಿಜೆಪಿಯವರು‌ ಸದನ ಒಳಗೆ ಮತ್ತು ಹೊರಗೆ ಅಕ್ರಮ ಬಾಂಗ್ಲಾ ವಲಿಸಗರ ಕುರಿತು ಹತ್ತಾರು ಬಾರಿ ಪ್ರಶ್ನೆ ಎತ್ತಿದ್ದಾರೆ. ಪಿಆರ್‌ಸಿ ನೀಡುವುದರಿಂದ ಅಕ್ರಮ ವಲಸಿಗರನ್ನು ಹೊರ ಹಾಕಲು ಉಪಯೋಗ ಆಗುತ್ತದೆ‌.

ಅಕ್ರಮ ವಲಸಿಗರಿಗೆ ಯಾವುದೇ ರೀತಿಯ ಸವಲತ್ತುಗಳು ಸಿಗುವುದಿಲ್ಲ. ನಾವು ಓದುವಾಗ ರಾಜ್ಯ ಸರ್ಕಾರ ಹಲವು ಸರ್ಟಿಫಿಕೇಟ್‌ಗಳನ್ನು ಕೊಟ್ಟಿದೆ. ಈಗಲೂ ತಹಶೀಲ್ದಾರ್ ಅವರೇ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಸಿಟಿಜನ್‌ಶಿಪ್ ನೀಡುವುದಕ್ಕೂ ಮತ್ತು ನಿವಾಸ ಪ್ರಮಾಣಪತ್ರ ನೀಡುವುದಕ್ಕು ಬಹಳ ವ್ಯತ್ಯಾಸವಿದೆ. ನಾಗರಿಕತ್ವ ಪ್ರಮಾಣಪತ್ರ ಕೇಂದ್ರ ಸರ್ಕಾರ ನೀಡುತ್ತದೆ. ಪಿಆರ್‌ಸಿ ನೀಡುವುದರಲ್ಲಿ ಯಾವುದೇ ರೀತಿಯ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಮಾನದಂಡಗಳನ್ನು ರೂಪಿಸಲಾಗಿದೆ. ಎಲ್ಲರಿಗೂ ಪಿಆರ್‌ಸಿ ಸಿಗುವುದಿಲ್ಲ ಎಂದು ಹೇಳಿದರು.

ಎಸ್‌ಐಆರ್ ವೇಳೆ ದಲಿತರ ಮತದಾರರನ್ನು ಕೈಬಿಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ವತಿಯಿಂದ ಎಚ್ಚರಿಕೆ ವಹಿಸಲಾಗುತ್ತಿದೆ. 2 ಪಕ್ಷದಲ್ಲೂ‌ ಬಿಎಲ್‌ಎ ಮಾಡಬೇಕು. ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ, ಸರಿಪಡಿಸಲು ಅವಕಾಶವಿದೆ ಎಂದರು.

ಶಿವಾಜಿನಗರದಲ್ಲಿ ತೆರವಿಗೆ ಹೋದ ಅಧಿಕಾರಿಗಳಿಗೆ ಹಲ್ಲೆ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಲ್ಲೆ ಯಾರೇ ಮಾಡಿರಲಿ. ಪೊಲೀಸರು ಕಾನೂನು ಪ್ರಕಾರ ಕೇಸ್ ದಾಖಲಿಸುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಪ್ರೊ. ಇಂದಿರಾ ಕೃಷ್ಣಪ್ಪ, ಎಂ. ವೆಂಕಟಸ್ವಾಮಿ, ಶ್ರೀಧರ್ ಕಲಿವೀರ, ಸುಬ್ಬು ಹೊಲೆಯಾರ್ ಹಾಗೂ ಕಂದಾಯ ಇಲಾಖೆಯ ಅಪರ‌ ಮುಖ್ಯ ಕಾರ್ದದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಆರ್ಥಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.