ಈ ವರ್ಷವೇ ರಾಜ್ಯದ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ: ರಾಜ್ಯ ಚುನಾವಣಾ ಆಯುಕ್ತರ ಘೋಷಣೆ

ಮೈಸೂರು: ರಾಜ್ಯದ ಐದು ಮಹಾನಗರ ಪಾಲಿಕೆಗಳಿಗೆ ಈ ವರ್ಷವೇ ಚುನಾವಣೆ ಮಾಡುತ್ತೇವೆ. ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಕೊಡಲೀ ಬಿಡಲಿ ಎಂಬುದಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸರ್ಕಾರ ಮೀಸಲಾತಿ ಕೊಡಲೀ, ಬಿಡಲಿ ನಾವು ಈ ವರ್ಷವೇ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವುದಾಗಿ ತಿಳಿಸಿದರು.

ಹೈಕೋರ್ಟ್ ಗೆ ಮೀಸಲಾತಿ ಸಂಬಂಧ ಅರ್ಜಿ ಸಲ್ಲಿಸಲಾಗಿದೆ. ಹಳೇ ಮೀಸಲಾತಿ ಪಟ್ಟಿಯಂತೆಯೇ ಚುನಾವಣೆ ನಡೆಸಲು ಮನವಿ ಮಾಡುತ್ತೇವೆ. ಅನುಮತಿ ನೀಡಿದ ಬಳಿಕ ಶೀಘ್ರವೇ ಐದು ಮಹಾನಗರ ಪಾಲಿಕೆಗಳ ಚುನಾವಣೆ ನಡೆಸುವುದಾಗಿ ಹೇಳಿದರು.

ರಾಜ್ಯ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಐದು ಮಹಾಗನರ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿ ಸಿದ್ಧವಾಗಿದೆ. ಮೈಸೂರು ಮಹಾನಗರ ಪಾಲಿಕೆ, ಶಿವಮೊಗ್ಗ, ದಾವಣಗೆರೆ, ತುಮಕೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆ ಎಂಬುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಅನಿಸುವುದಿಲ್ಲ. ಸರ್ಕಾರಕ್ಕೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.  ಜೊತೆಗೆ ಸರ್ಕಾರಕ್ಕೂ ಬೇರೆ ಕೆಲಸಗಳಿರುತ್ತದೆ. ಇದೆಲ್ಲ ನೋಡಿಕೊಂಡು ಮಹಾಗನರ ಪಾಲಿಕೆ ಚುನಾವಣೆ ಬಾಡಬೇಕು ಎಂಬುದಾಗಿ ರಾಜ್ಯ ಚುನಾವಣಾ ಆಯುಕ್ತ ಜಿಎಸ್ ಸಂಗ್ರೇಶಿ ಹೇಳಿದರು.