ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸಲು ಬಯಸುವ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಪೋಷಕರಿಗೆ ರಾಜ್ಯ ಸರ್ಕಾರ ಭಾರಿ ಸಿಹಿಸುದ್ದಿ ನೀಡಿದೆ. ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ದುರ್ಬಲ ಮತ್ತು ಹಿಂದುಳಿದ ವರ್ಗದ ಮಕ್ಕಳ ಪ್ರವೇಶಕ್ಕೆ ಇದ್ದ ಪೋಷಕರ ಗರಿಷ್ಠ ವಾರ್ಷಿಕ ಆದಾಯ ಮಿತಿಯನ್ನು ₹3.50 ಲಕ್ಷದಿಂದ ₹8.00 ಲಕ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಯಾವ ಶಾಲೆಗಳಿಗೆ ಅನ್ವಯ?
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ (Right of Children to Free and Compulsory Education Act- RTE) ಸೆಕ್ಷನ್ 12(1) (ಸಿ) ಅಡಿಯಲ್ಲಿ, ರಾಜ್ಯದ ಎಲ್ಲಾ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಅಲ್ಪಸಂಖ್ಯಾತವಲ್ಲದ ಶಾಲೆಗಳಲ್ಲಿ 1ನೇ ತರಗತಿಯ (ಅಥವಾ ಪೂರ್ವ ಪ್ರಾಥಮಿಕ ತರಗತಿ) ಶೇ. 25ರಷ್ಟು ಸೀಟುಗಳನ್ನು ನೆರೆಹೊರೆಯ ದುರ್ಬಲ ಮತ್ತು ಅಶಕ್ತ ವರ್ಗದ ಮಕ್ಕಳಿಗೆ ಮೀಸಲಿಡಲಾಗುತ್ತದೆ. ಈ ಸೀಟುಗಳ ಪಡೆಯಲು ಇನ್ನು ಮುಂದೆ ವಾರ್ಷಿಕ ₹8 ಲಕ್ಷದವರೆಗೆ ಆದಾಯ ಹೊಂದಿರುವ ಕುಟುಂಬಗಳೂ ಅರ್ಹವಾಗಿರುತ್ತವೆ.
ಹೈಕೋರ್ಟ್ ಸೂಚನೆಯಂತೆ ಮಹತ್ವದ ನಿರ್ಧಾರ:
2013ರ ಸರ್ಕಾರಿ ಆದೇಶದ ಅನ್ವಯ ಈವರೆಗೆ ಆರ್ಟಿಇ ಪ್ರವೇಶಾತಿಗೆ ವಾರ್ಷಿಕ ಆದಾಯ ಮಿತಿ ₹3.50 ಲಕ್ಷಕ್ಕೆ ಸೀಮಿತವಾಗಿತ್ತು. ಆದರೆ, ಬದಲಾದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆರ್ಟಿಇ ಆದಾಯ ಮಿತಿಯನ್ನು ಮರುಪರಿಶೀಲಿಸಿ ಹೆಚ್ಚಿಸುವಂತೆ ಕರ್ನಾಟಕ ಹೈಕೋರ್ಟ್ 2023ರ ಜನವರಿ 27ರಂದು (ರಿಟ್ ಅರ್ಜಿ ಸಂಖ್ಯೆ: 21964/2022) ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆ ಹಾಗೂ ಆರ್ಥಿಕ ಇಲಾಖೆಯ ಸಹಮತಿಯ ಮೇರೆಗೆ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಯಾವೆಲ್ಲಾ ವರ್ಗದ ಮಕ್ಕಳಿಗೆ ಈ ಸೌಲಭ್ಯ ಅನ್ವಯವಾಗುತ್ತದೆ?
ನೂತನ ಅಧಿಸೂಚನೆಯ ಪ್ರಕಾರ ಈ ಕೆಳಗಿನ 13 ವರ್ಗಗಳ ಮಕ್ಕಳು ಆರ್ಟಿಇ ಅಡಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ:
ಅನಾಥ ಮಕ್ಕಳು
ಎಚ್ಐವಿ (HIV) ಬಾಧಿತ ಅಥವಾ ಸೋಂಕಿತ ಮಕ್ಕಳು
ತೃತೀಯ ಲಿಂಗಿ (Transgender) ಮಕ್ಕಳು
ವಿಶೇಷ ಅಗತ್ಯವುಳ್ಳ (ದಿವ್ಯಾಂಗ) ಮಕ್ಕಳು
ವಲಸೆ ಮತ್ತು ಬೀದಿ ಬದಿಯ ಮಕ್ಕಳು
2015ರ ಏಪ್ರಿಲ್ 1ರ ನಂತರ ಬರಗಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು
ಪರಿಶಿಷ್ಟ ಜಾತಿ (SC)
ಪರಿಶಿಷ್ಟ ಪಂಗಡ (ST)
ಪ್ರವರ್ಗ-1 (Category-1)
ಪ್ರವರ್ಗ-2ಎ (Category-2A)
ಪ್ರವರ್ಗ-3ಎ (Category-3A)
ಪ್ರವರ್ಗ-3ಬಿ (Category-3B)
ದುರ್ಬಲ ವರ್ಗ (Weaker Section – ಮೇಲಿನ ವರ್ಗಗಳನ್ನು ಹೊರತುಪಡಿಸಿ ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ರಾಜ್ಯದ ಇತರ ಎಲ್ಲಾ ಜಾತಿ ಮತ್ತು ಸಮುದಾಯದ ಮಕ್ಕಳು).
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನೆ) ಶುಭಮಂಗಳ ಆರ್.ವಿ. ಅವರು ನವೆಂಬರ್ 16, 2026ರಂದು ಅಧಿಕೃತ ಸರ್ಕಾರಿ ಆದೇಶ ಹೊರಡಿಸಿದ್ದಾರೆ




