ಮಂತ್ರಾಲಯದಲ್ಲಿ ‘ರಾಘವ ಸರೋವರ’ಕ್ಕೆ ಭೂಮಿಪೂಜೆ: ಶ್ರೀ ಸುಬುಧೇಂದ್ರ ತೀರ್ಥರಿಂದ ಚಾಲನೆ

ಮಂತ್ರಾಲಯ: ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯದ ಉಳಿವಿಗಾಗಿ ಮಹತ್ವದ ಹೆಜ್ಜೆಯಿಡಲಾಗಿದೆ. ಶ್ರೀ ರಾಘವ ಸರೋವರ ಟ್ರಸ್ಟ್ ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ‘ರಾಘವ ಸರೋವರ’ ನಿರ್ಮಾಣ ಕಾಮಗಾರಿಗೆ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾಂಪ್ರದಾಯಿಕ ಭೂಮಿ ಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಪ್ರಾಣಿ-ಪಕ್ಷಿಗಳಿಗೆ ಆಸರೆ ಒದಗಿಸುವುದು, ಹಸಿರು ಪರಿಸರವನ್ನು ವೃದ್ಧಿಸುವುದು ಹಾಗೂ ಸುತ್ತಮುತ್ತಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಮನುಕುಲಕ್ಕೆ ನೆರವಾಗುವ ಸದಾಶಯದೊಂದಿಗೆ ಈ ಬೃಹತ್ ಜಲಸಂರಕ್ಷಣಾ ಯೋಜನೆಯನ್ನು ರೂಪಿಸಲಾಗಿದೆ.

ಪರಿಸರ ರಕ್ಷಣೆಯ ಕೈಂಕರ್ಯಕ್ಕೆ ಮಠದ ಬೆಂಬಲ: ಶ್ರೀಗಳ ಆಶೀರ್ವಚನ

ಸರೋವರದ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಹಾಕಿ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು, “ಪ್ರಕೃತಿ ಹಾಗೂ ಜಲಮೂಲಗಳನ್ನು ಸಂರಕ್ಷಿಸುವ ಇಂತಹ ಪುಣ್ಯದ ಕಾರ್ಯಗಳಿಗೆ ಮಂತ್ರಾಲಯ ಸಂಸ್ಥಾನ ಸದಾ ತನ್ನ ಪೂರ್ಣ ಸಹಕಾರ ಮತ್ತು ಆಶೀರ್ವಾದವನ್ನು ನೀಡಲಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಟ ಹಾಗೂ ಟ್ರಸ್ಟಿ ಮದನ್ ಪಟೇಲ್ ಮಾತನಾಡಿ, “ಸೃಷ್ಟಿಯಲ್ಲಿ ಪ್ರಕೃತಿಯೇ ಅತ್ಯುನ್ನತ ಕಲೆಗಾರ. ಆ ಪರಿಸರವನ್ನು ಕಲುಷಿತಗೊಳಿಸದೆ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಉಳಿಸಿಕೊಡುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ,” ಎಂದರು. ಈ ಮಹತ್ಕಾರ್ಯಕ್ಕೆ ಮದನ್ ಪಟೇಲ್ ಅವರು ವೈಯಕ್ತಿಕವಾಗಿ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿ ಸಮಾಜಮುಖಿ ಕಾಳಜಿ ಮೆರೆದಿದ್ದಾರೆ.

ಅಂತರ್ಜಲ ಬಿಟ್ಟು ಅಂತರ್ಜಾಲಕ್ಕೆ ಜೋತುಬಿದ್ದಿದ್ದೇವೆ: ಸಂಸದ ಡಾ. ಸಿ.ಎನ್. ಮಂಜುನಾಥ್

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಜೀವಜಲವೇ ಅಮೂಲ್ಯವಾದ ಬಿಳಿ ಚಿನ್ನವಾಗಿದೆ. ಆದರೆ ದುರದೃಷ್ಟವಶಾತ್, ಇಂದಿನ ಸಮಾಜಕ್ಕೆ ಭವಿಷ್ಯದ ಬದುಕಿಗೆ ಆಧಾರವಾದ ‘ಅಂತರ್ಜಲ’ ಸಂರಕ್ಷಣೆಗಿಂತ ಮೊಬೈಲ್‌ನ ‘ಅಂತರ್ಜಾಲ’ದ (ಇಂಟರ್ನೆಟ್) ಗೀಳೇ ಹೆಚ್ಚಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೆರೆ ನಿರ್ಮಾಣಕ್ಕೆ ಮುಕ್ತ ಹಸ್ತದಿಂದ ದೇಣಿಗೆ ನೀಡಿದ ಮದನ್ ಪಟೇಲ್ ಅವರ ಪರಿಸರ ಪ್ರೇಮವನ್ನು ಅವರು ಕೊಂಡಾಡಿದರು.

ವಿನ್ಯಾಸ ಮತ್ತು ಗಣ್ಯರ ಉಪಸ್ಥಿತಿ:

ಬೆಂಗಳೂರಿನ ಇಂಡಸ್ ಹರ್ಬ್ಸ್ ಸಂಸ್ಥೆಯ ರವೀಂದ್ರ ಟಿ.ಸಿ. ಅವರು ಈ ಸರೋವರದ ಯೋಜನಾ ನೀಲನಕ್ಷೆಯನ್ನು ರೂಪಿಸಿದ್ದು, ಟ್ರಸ್ಟ್‌ನ ಪ್ರಮುಖರಾದ ಧನಂಜಯ್, ಅನಿಲ್ ಹಾಗೂ ಆನಂದ್ ಅವರು ಯೋಜನೆಯ ಮುಂಚೂಣಿಯಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಅನಸೂಯಾ ಮಂಜುನಾಥ್, ಪ್ರೊ. ಡಾ. ಸಿ. ರಾಮಚಂದ್ರ, ಚಲನಚಿತ್ರ ನಟ ಮಯೂರ್ ಪಟೇಲ್, ‘ರಾಶಿ’ ಚಿತ್ರತಂಡದ ನಟ ಆದಿತ್ಯ ಶಶಿಕುಮಾರ್, ನಿರ್ಮಾಪಕ ಅಖಿಲೇಶ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.