ವೃಂದಾವನದ ‘ಬ್ರಜರಾಜ್ ಉತ್ಸವ’ದಲ್ಲಿ ‘ಮಾತೆ ಗಂಗೆ’ಯಾಗಿ ಕಂಗೊಳಿಸಿದ ಹೇಮಾ ಮಾಲಿನಿ

ವೃಂದಾವನ: ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ವೃಂದಾವನದ ಹರಿದಾಸ ಸಭಾಂಗಣದಲ್ಲಿ ನಡೆದ ‘ಬ್ರಜರಾಜ್ ಉತ್ಸವ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಗಂಗಾ’ ಎಂಬ ಶಾಸ್ತ್ರೀಯ ನೃತ್ಯ-ನಾಟಕವನ್ನು ಪ್ರಸ್ತುತಪಡಿಸಿದರು. ಸುಮಾರು 90 ನಿಮಿಷಗಳ ಈ ಪ್ರದರ್ಶನದಲ್ಲಿ ಅವರು ‘ಮಾತೆ ಗಂಗೆ’ಯ ಪಾತ್ರದಲ್ಲಿ ಗಮನ ಸೆಳೆದರು.

78 ವರ್ಷದ ಹೇಮಾ ಮಾಲಿನಿ ಅವರು ಪವಿತ್ರ ಗಂಗಾ ನದಿಯು ಸ್ವರ್ಗದಿಂದ ಭೂಮಿಗೆ ಇಳಿದುಬಂದ ದಿವ್ಯ ಕಥಾನಕವನ್ನು ನೃತ್ಯ ಮತ್ತು ಅಭಿನಯದ ಮೂಲಕ ಮನಮೋಹಕವಾಗಿ ಕಟ್ಟಿಕೊಟ್ಟರು. ಪ್ರದರ್ಶನದ ಪ್ರಮುಖ ಕ್ಷಣದಲ್ಲಿ ಕ್ರೇನ್ ಸಹಾಯದಿಂದ ವೇದಿಕೆಯ ಮೇಲೆ ಇಳಿದುಬಂದ ಅವರು, ಗಂಗೆಯ ಅವತರಣದ ದೃಶ್ಯವನ್ನು ಪರಿಣಾಮಕಾರಿಯಾಗಿ ಮೂಡಿಸಿದರು.

ಈ ನೃತ್ಯ-ನಾಟಕವನ್ನು ಹಲವು ವರ್ಷಗಳಿಂದ ಪ್ರದರ್ಶಿಸುತ್ತಿರುವುದಾಗಿ ತಿಳಿಸಿದ ಹೇಮಾ ಮಾಲಿನಿ, ಪ್ರಯಾಗರಾಜದಲ್ಲಿ ಆರಂಭವಾದ ಪ್ರದರ್ಶನದ ಪಯಣ ಬಳಿಕ ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಿಗೆ ವಿಸ್ತರಿಸಿದೆ ಎಂದರು. ಇತ್ತೀಚೆಗೆ ಕಥಾನಕದಲ್ಲಿ ಯಮುನಾ ನದಿಯನ್ನೂ ಸೇರಿಸಲಾಗಿದ್ದು, ಗಂಗೆ ಮತ್ತು ಯಮುನೆ ಎರಡೂ ನದಿಗಳು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿವೆ ಎಂದು ಹೇಳಿದರು.

ಯಮುನಾ ನದಿ ತೀವ್ರವಾಗಿ ಕಲುಷಿತಗೊಂಡಿದ್ದು, ಅದರ ಸ್ವಚ್ಛತೆಗೆ ತುರ್ತು ಕ್ರಮ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಗಂಗೆಯನ್ನು ಪ್ರಧಾನವಾಗಿರಿಸಿಕೊಂಡೇ ಯಮುನೆಯ ಕಥೆಯನ್ನೂ ನೃತ್ಯ-ನಾಟಕದಲ್ಲಿ ಅಳವಡಿಸಲಾಗಿದೆ ಎಂದರು. ‘ಬ್ರಜರಾಜ್ ಉತ್ಸವ’ದ ಭಾಗವಾಗಿ ವೃಂದಾವನದಲ್ಲಿ ಈ ಪ್ರದರ್ಶನ ನೀಡಲು ಸಾಧ್ಯವಾಗಿರುವುದಕ್ಕೆ ಸಂತೋಷವಾಗಿದೆ ಎಂದು ಹೇಮಾ ಮಾಲಿನಿ ತಿಳಿಸಿದರು.