ಬೆಂಗಳೂರು: ಅತ್ಯಂತ ಅಪಮಾನಕರವಾಗಿ ಅಧಿಕಾರದಿಂದ ಕೆಳಗಿಳಿದ ಸಿದ್ದರಾಮಯ್ಯನವರಿಗೆ(Siddaramaiah) ತಮ್ಮ ವಿರುದ್ಧ ನಡೆದಿರುವ ಸಂಚಿನ ಬಗ್ಗೆ ರಕ್ತ ಕುದಿಯುತ್ತಿಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(Union Minister HD Kumaraswamy) ಅವರು ಪ್ರಶ್ನಿಸಿದರು.
ಬ್ಲಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಮತ್ತು ಆತನ ಸಂಗಡಿಗರನ್ನು ಬಂಧಿಸಲು ಒತ್ತಾಯಿಸಿ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನನಗೆ ಬಹಳ ಆಶ್ಚರ್ಯವಾಗುತ್ತಿದೆ. ಸಿದ್ದರಾಮಯ್ಯನವರು ಮೌನದಿಂದ ಇರುವ ವ್ಯಕ್ತಿಯಲ್ಲ. ತಮ್ಮ ವಿರುದ್ಧ ಅನ್ಯಾಯ ನಡೆದರೆ ಸಹಿಸುವ ಜಾಯಮಾನದವರಲ್ಲ. ತಮ್ಮ ವಿರುದ್ಧ ರಾಜ್ಯದ ಈಗಿನ ಮುಖ್ಯಮಂತ್ರಿ ಮತ್ತು ಕಿಡಿಗೇಡಿ ರಾಕೇಶ್ ಶೆಟ್ಟಿ ಸೇರಿ ನಡೆಸಿದ ಸಂಚಿನ ಕುರಿತಂತೆ ಅವರು ಮೌನ ವಹಿಸಿರುವುದು ನನಗೆ ನೋವು ತಂದಿದೆ ಎಂದು ಸಚಿವರು ಹೇಳಿದರು.
ಈ ವಿಷಯವನ್ನು ನಾನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ಈಗಾಗಲೇ ಪೊಲೀಸ್ ಆಯುಕ್ತರಿಗೆ, ಇಂದು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಇದರ ಮೇಲೆ ಪೊಲೀಸರು ಕ್ರಮ ಜರುಗಿಸದೆ ಇದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸದ ಹೊರತು ನಾವು ವಿಶ್ರಮಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಪೊಲೀಸ್ ಮಹಾನಿರ್ದೇಶಕರಿಗೆ ಸುದೀರ್ಘ ದೂರನ್ನು ಕೊಟ್ಟಿದ್ದೇವೆ. ರಾಕೇಶ್ ಶೆಟ್ಟಿ ಮತ್ತು ಆತನ ಸಹಚರರು ನಡೆಸಿರುವ ಅಕ್ರಮಗಳು, ರಹಸ್ಯ ಕಾರ್ಯಾಚರಣೆ ಹೆಸರಿನಲ್ಲಿ ಮಾಡಿರುವ ಹಣ ವಸೂಲಿ ರಾಜಕಾರಣಿಗಳು, ಪೊಲೀಸರು ಮತ್ತು ಸರ್ಕಾರದ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿರುವ ಎಲ್ಲಾ ಅಂಶಗಳನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಅವನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ ವಿಜಯದಶಮಿ ನಂತರ ಸ್ವತಃ ನಾನೇ ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸಚಿವರು ನೇರ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರಿಗೆ ರಕ್ತ ಕುಡಿಯುತ್ತಿಲ್ಲವೆ ಎಂದು ಮತ್ತೆ ಮತ್ತೆ ಕೇಳಿದ ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಲು ಈ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಆದರೆ ಅವರ ಹೆಸರನ್ನು ಹಾಳು ಮಾಡಲು, ಆ ಮೂಲಕ ಹಣ ವಸೂಲಿ ಮಾಡಲು ಈ ವಿಡಿಯೋ ಮಾಡಲಾಗಿದೆ. ಇದೆಲ್ಲವನ್ನೂ ನೋಡಿ ಸಿದ್ದರಾಮಯ್ಯ ಅವರಿಗೆ ರಕ್ತ ಕುದಿಯುತ್ತಿಲ್ಲವೇ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ವಿಷಯಗಳಲ್ಲಿ ಸಂಘರ್ಷ ಮಾಡಿಕೊಂಡಿದ್ದೇವೆ. ವಿಧಾನಸಭೆಯಲ್ಲಿ ವಾಗ್ವಾದ ನಡೆಸಿದ್ದೇವೆ. ಆದರೆ ಇಂಥ ವಿಷಯಕ್ಕೆ ನನ್ನ ಬೆಂಬಲ ಇಲ್ಲ. ಅವರ ವಿರುದ್ಧ ನಡೆದಿರುವ ಸಂಚನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಅವರು ಬಿಟ್ಟರು ನಾನು ಬಿಡುವ ಪ್ರಶ್ನೆಯೇ ಇಲ್ಲ. ವಿಜಯದಶಮಿ ನಂತರ ಪುನಾ ಹೋರಾಟ ಕೈಗೆತ್ತಿಕೊಳ್ಳುತ್ತೇನೆ ಎಂದು ಅವರು ಗುಡುಗಿದರು.
ಆ ಕ್ರಿಮಿನಲ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡಿ:
ಡಿಜಿ ಅವರು ನಾವು ಕೊಟ್ಟ ದೂರನ್ನು ಮೌನದಿಂದ ಸ್ವೀಕಾರ ಮಾಡಿದ್ದಾರೆ. ಪೊಲೀಸ್ ಆಯುಕ್ತರದ್ದು ಆಯಿತು, ಈಗ ಡಿಜಿ ಏನು ಮಾಡುತ್ತಾರೋ ನೋಡೋಣ. ಮಂತ್ರಿಗಳ ವಿರುದ್ಧ ಸ್ಟಿಂಗ್ ಮಾಡಲಾಗಿದೆ ಮುಖ್ಯಮಂತ್ರಿಯೇ ಸಂಪುಟ ಸಭೆಯಲ್ಲಿ ಹೇಳುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದು ಇದೆಯೇ? ಎಂದು ಸಚಿವರು ಕಿಡಿಕಾರಿದರು.
ಮಂತ್ರಿಗಳು ಮತ್ತು ಶಾಸಕರನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಈ ಮುಖ್ಯಮಂತ್ರಿ ಆರೋಪಿ ರಾಕೇಶ್ ಶೆಟ್ಟಿ ಜತೆ ಸೇರಿ ಸ್ಟಿಂಗ್ ರೀತಿಯ ಹೀನ ಕೃತಿಗಳನ್ನು ಎಸಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಗೃಹಮಂತ್ರಿ ರಾಜಾರೋಷವಾಗಿ ಲಜ್ಜೆಗೆಟ್ಟು ಮಾತನಾಡುತ್ತಿದ್ದಾರೆ. ಇನ್ನು ಪೊಲೀಸರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ? ಈ ಸರ್ಕಾರ ಸ್ಟಿಂಗ್ ನಡೆಸುವ ಅಪರಾಧಿಯ ಬೂಟ್ ಪಾಲಿಶ್ ಮಾಡಿಕೊಂಡು ಕೂತಿದೆ. ನಾಚಿಕೆಯಾಗಬೇಕು ಇವರಿಗೆ. ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಮಾಡುತ್ತಿರಲ್ಲ, ಅವತ್ತು ಸಿದ್ದರಾಮಯ್ಯ ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸಿ ತನಗೆ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಆ ಕ್ರಿಮಿನಲ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡಿ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.




