ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವ; ‘ಲೌಕಿಕ ಲಾಭಗಳಿಗಾಗಿ ಗಾಯತ್ರಿ ಮಂತ್ರ ಪಠಣ ಸರಿಯಲ್ಲ’ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಏಳನೇ ದಿನ ಕಾಳರಾತ್ರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಯಿತು. ಲೋಕಕಲ್ಯಾಣಾರ್ಥವಾಗಿ ಲಕ್ಷ್ಮಿ ನರಸಿಂಹ ಹೋಮ ಹಾಗೂ ಗಾಯತ್ರಿ ಹೋಮಗಳನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಗಾಯತ್ರಿ ಮಂತ್ರದ ಮಹತ್ವವನ್ನು ವಿವರಿಸಿದರು. “ಗಾಯತ್ರಿ ಮಂತ್ರವನ್ನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಅಥವಾ ಐಷಾರಾಮಿ ಜೀವನದಂತಹ ಲೌಕಿಕ ಲಾಭಗಳಿಗಾಗಿ ಪಠಿಸಬಾರದು. ಅದರ ಧ್ಯಾನದಿಂದ ಅಹಂಕಾರ ಅಳಿದು ಆತ್ಮಜ್ಞಾನ ಜಾಗೃತಗೊಳ್ಳುತ್ತದೆ” ಎಂದು ಹೇಳಿದರು.

ಸಮಯದ ಮಹತ್ವವನ್ನು ಒತ್ತಿಹೇಳಿದ ಅವರು, ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೇವಾ ಕಾರ್ಯಗಳಿಗೆ ಗಣ್ಯರ ಮೆಚ್ಚುಗೆ

ಮುಖ್ಯ ಅತಿಥಿಯಾಗಿದ್ದ ತಮಿಳುನಾಡಿನ ರಾಧಾಪುರಂ ಕ್ಷೇತ್ರದ ಶಾಸಕ ಹಾಗೂ ವೈದ್ಯ ಡಾ. ಸತೀಶ್ ಕ್ರಿಸ್ಟೋಫರ್ ಮಾತನಾಡಿ, ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಉಚಿತ ವೈದ್ಯಕೀಯ ಸೇವೆ, ಆಹಾರ ಮತ್ತು ಶಿಕ್ಷಣ ಒದಗಿಸುತ್ತಿರುವ ಸದ್ಗುರುಗಳ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಪ್ರತಿಯೊಬ್ಬರಿಗೂ ಸಮಾನ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು ಎಂದು ಆಶಿಸಿದರು.

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಉಚಿತ ಶಿಕ್ಷಣದ ಮೂಲಕ ವೈದ್ಯರು ಮತ್ತು ಎಂಜಿನಿಯರ್‌ಗಳನ್ನಾಗಿ ರೂಪಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಕಲಬುರಗಿಯಲ್ಲಿ ಶ್ರೀ ಸತ್ಯಸಾಯಿ ಮಾನವೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಭಾಗ್ಯದ ಸಂಗತಿ ಎಂದರು. ಸದ್ಗುರುಗಳ ಸೇವಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ಭಟ್ ಅವರು ಹೋಮಗಳ ಮಹತ್ವವನ್ನು ವಿವರಿಸಿದರು. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ್ ಮತ್ತು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಸತ್ಯಸಾಯಿ ಗ್ರಾಮದಲ್ಲಿ ಇಂದು ‘ಅನುಭವ ಮಂಟಪ’

ನವರಾತ್ರಿ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಸತ್ಯಸಾಯಿ ಗ್ರಾಮದಲ್ಲಿ ‘ಅನುಭವ ಮಂಟಪ’ ವಿಶೇಷ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾದಗುರುಕುಲದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ, ಸಿದ್ದರಾಮೇಶ್ವರ, ಜೇಡರ ದಾಸಿಮಯ್ಯ ಹಾಗೂ ಚೆನ್ನಬಸವಣ್ಣ ಸೇರಿದಂತೆ 10 ಶಿವಶರಣರ ತಲಾ ಒಂದೊಂದು ವಚನವನ್ನು ಆಯ್ಕೆ ಮಾಡಲಾಗಿದೆ.

ಹತ್ತು ವಿಭಿನ್ನ ರಾಗಗಳಲ್ಲಿ ವಚನಗಳನ್ನು ಅರ್ಥವಿವರಣೆಯೊಂದಿಗೆ ಪ್ರಸ್ತುತಪಡಿಸಲಾಗುತ್ತದೆ. ಹಡಪದ ಅಪ್ಪಣ್ಣನ ‘ಅಂಗವ ಮರೆದು ಲಿಂಗವ ಕೂಡಿ’ ವಚನವನ್ನು ಮಾಂಡ್ ರಾಗದಲ್ಲಿ ಹಾಗೂ ಆಯ್ದಕ್ಕಿ ಲಕ್ಕಮ್ಮನ ‘ಗರ್ವದಿಂದ ಮಾಡುವ ಭಕ್ತಿ’ ವಚನವನ್ನು ಶುದ್ಧ ಸಾರಂಗ ರಾಗದಲ್ಲಿ ಸಂಯೋಜಿಸಲಾಗಿದೆ.