ಕೇರಳ: ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ ಸಂಭವಿಸಿದ್ದು, ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತಕ್ಕೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ವಯನಾಡಿನ ಚೂರಲ್ಮಲದಲ್ಲಿ ನಡೆದಿದ್ದ ಭೀಕರ ಭೂಕುಸಿತ ದುರಂತದ ನೆನಪು ಮಾಸುವ ಮುನ್ನವೇ, ಇದೀಗ ಮೆಪ್ಪಾಡಿ ಬಳಿಯ ಸುರಂಗ ನಿರ್ಮಾಣ ಪ್ರದೇಶದಲ್ಲಿ ಅಂತಹದ್ದೇ ಕರುಣಾಜನಕ ಘಟನೆ ಮರುಕಳಿಸಿದೆ. ವಯನಾಡು ಸುರಂಗ ಯೋಜನೆಯ ಮೀನಾಕ್ಷಿ ಸೇತುವೆ ಬಳಿ ಈ ದುರಂತ ಸಂಭವಿಸಿದೆ.
ಹೆಚ್ಚುತ್ತಿರುವ ಆತಂಕ ಮತ್ತು ರಕ್ಷಣಾ ಕಾರ್ಯ
ಮಣ್ಣಿನ ಕುಸಿತದ ತೀವ್ರತೆಗೆ ಸುಮಾರು 20 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, 30 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಘಟನೆಯಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ತಕ್ಷಣವೇ ರಕ್ಷಿಸಲಾಗಿದ್ದು, ಅವರನ್ನು ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಮತ್ತು ತನ್ಮಯ್ ಘೋಷ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ತುರ್ತು ಕ್ರಮ ಮತ್ತು ರಸ್ತೆ ಸಂಪರ್ಕ ಕಡಿತ
ಭೂಕುಸಿತದ ತೀವ್ರತೆಯ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ಇಬ್ಬರು ಸಚಿವರನ್ನು ಘಟನಾ ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದ್ದಾರೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಭೀಕರವಾಗಿ 26 ಸೆಂಟಿಮೀಟರ್‌ನಷ್ಟು ಮಳೆಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಚೂರಲ್ ಮಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ನಿನ್ನೆಯಿಂದಲೇ ಸುರಂಗ ಕಾಮಗಾರಿಯನ್ನು ನಿಲ್ಲಿಸಲಾಗಿತ್ತಾದರೂ, ದುರದೃಷ್ಟವಶಾತ್ ಈ ಅವಘಡ ಸಂಭವಿಸಿದೆ. ಸದ್ಯ ಮಣ್ಣು ಕುಸಿದಿರುವ ಜಾಗದಲ್ಲಿ ಹಲವಾರು ವಾಹನಗಳು ಕೂಡ ಮಣ್ಣಿನಡಿ ಹೂತುಹೋಗಿವೆ.




