ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಹಾಗೂ ಲಿಂಗಾಯತರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜ್ ರ ಬಸವಮಂಟಪ ಕೃತಿ ಮುಟ್ಟುಗೋಲು ಹಾಕುವಂತೆ ಹಾಗೂ ಸಾಮಾಜಿಕ ತಾಣಗಳಿಂದ ಈ ಕುರಿತ ಎಲ್ಲ ವಿಡಿಯೋ ತೆಗೆದು ಹಾಕುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಬಿ ಖಂಡ್ರೆ(Minister Eshwar Khandre) ಒತ್ತಾಯಿಸಿದ್ದಾರೆ. ಆ ಮೂಲಕ ಸಚಿವ ಈಶ್ವರ್ ಖಂಡ್ರೆ(Minister Eshwar Khandre) ಲೇಖಕ ಲೇಖಕ ರವಿ ಹಂಜ್ ಅವರ ಬಸವಮಂಟಪ ಕೃತಿ ಮುಟ್ಟುಗೋಲು ಹಾಕುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಸಚಿವನಾಗಿ ನಾನು ಒಂದು ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಬಹಿರಂಗವಾಗಿ ಒತ್ತಾಯಸಬಾರದು, ಆದರೆ ಇಡೀ ಲಿಂಗಾಯತ ಸಮುದಾಯಕ್ಕೆ ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳಿಗೆ ಘಾಸಿ ಉಂಟು ಮಾಡುವಂತೆ ಆಧಾರ ರಹಿತ ಆರೋಪ ಮಾಡಿರುವ ರವಿ ಹಂಜಿ ಕೃತಿ ಸಮಾಜದ ಸ್ವಾಸ್ಥ್ಯ ಕದಡುವಂತಿದ್ದು, ಕೂಡಲೇ ಮುಟ್ಟುಗೋಲು ಹಾಕುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ತಾವು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾನು ಗೌರವ ನೀಡುತ್ತೇನೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆ ದುರುಪಯೋಗ ಪಡಿಸಿಕೊಂಡು ಶರಣ ದಾಸೋಹ ಮಾಡಿದ್ದಾನೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುವುವರನ್ನು ಮತ್ತು ಅಂತಹ ಬರಹವನ್ನು ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕೂಡಲೇ ಈ ಸಂಬಂಧ ರವಿ ಹಂಜಿ ವಿಡಿಯೋಗಳನ್ನು ಸಾಮಾಜಿಕ ತಾಣದಿಂದ ತೆಗೆದುಹಾಕಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಲಿಂಗಾಯತರನ್ನು ಲಿಂಗಾಹತರು ಎಂದು ಹೇಳಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆಯಾಗಿದೆ. ಇದು ವಿಶ್ವಾದ್ಯಂತ ಇರುವ ಬಸವಭಕ್ತರಿಗೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದ್ದು, ಲಿಂಗಾಯತ ಸಮುದಾಯಕ್ಕೂ ವೇದನೆ ಉಂಟು ಮಾಡಿದೆ. ಭಾವನಾತ್ಮಕ ವಿಚಾರಗಳ ಬಗ್ಗೆ ಯಾವುದೇ ಸಂಶೋಧನೆ ಇಲ್ಲದೆ ಸ್ವಯಂಘೋಷಿತ ಸಂಶೋಧಕರೆಂದು ಮಾತನಾಡುವ ಈ ವ್ಯಕ್ತಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು, ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ(Minister Eshwar Khandre) ಒತ್ತಾಯಿಸಿದ್ದಾರೆ.




