ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಚಿತ್ರದ ಮೊದಲ ಹಾಡು ‘ಓ ಮೈಸಾ ರೇ’ ಬಿಡುಗಡೆಯಾಗಿದೆ. ಇದನ್ನು ಯುದ್ಧದ ಘೋಷಣೆ, ನೋವು ಮತ್ತು ಆಕ್ರೋಶದ ಕೂಗು ಎಂದು ರಶ್ಮಿಕಾ ಬಣ್ಣಿಸಿದ್ದಾರೆ.
ಜೇಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿದ್ದು, ಸಿಂಧುಜಾ ಶ್ರೀನಿವಾಸನ್ ಹಾಡಿದ್ದಾರೆ. ಸುಡ್ಡಾಲ ಅಶೋಕ್ ತೇಜ ಸಾಹಿತ್ಯದಲ್ಲಿ ಸ್ತ್ರೀಶಕ್ತಿ ಮತ್ತು ಧೈರ್ಯವನ್ನು ಬಿಂಬಿಸಲಾಗಿದೆ. ಬ್ರಿಂದಾ ಮಾಸ್ಟರ್ ನೃತ್ಯ ನಿರ್ದೇಶನದ ಹಾಡಿನಲ್ಲಿ ರಶ್ಮಿಕಾ ಅವರ ಆ್ಯಕ್ಷನ್ ಲುಕ್ ಹಾಗೂ ಉತ್ಸಾಹಭರಿತ ಅಭಿನಯ ಗಮನ ಸೆಳೆಯುತ್ತದೆ.

ರವೀಂದ್ರ ಪುಲ್ಲೆ ನಿರ್ದೇಶನದ ಈ ಆ್ಯಕ್ಷನ್ ಚಿತ್ರವನ್ನು ಅನ್ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿದೆ. ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ನವೆಂಬರ್ 27ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.



