ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ಸಂಪರ್ಕ ವ್ಯವಸ್ಥೆಗೆ ಮತ್ತೊಂದು ಬಲ ಸಿಕ್ಕಿದ್ದು, ‘ನಮ್ಮ ಮೆಟ್ರೋ’ದ ಬಹುನಿರೀಕ್ಷಿತ ಪಿಂಕ್ ಲೈನ್ (ಗುಲಾಬಿ ಮಾರ್ಗ) ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಇದೇ ನವೆಂಬರ್ 13 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ಅವರು ಈ ನೂತನ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟಿಸಿ, ನಗರದ ಜನತೆಗೆ ಸಮರ್ಪಿಸಲಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ(Prime Minister Modi) ಲೋಕಾರ್ಪಣೆಗೊಳಿಸಲಿದ್ದಾರೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಸಿಲಿಕಾನ್ ಸಿಟಿ
ಉದ್ಘಾಟನಾ ದಿನದಂದು ಪ್ರಧಾನಿ ಮೋದಿ ಅವರು ತಾವರೆಕೆರೆಯಿಂದ ಐಐಎಂಬಿ-ಬೈಲೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಲಿದ್ದಾರೆ. ಈ ಹೊಸ ಮಾರ್ಗ ಕಾರ್ಯಾಚರಣೆಗೆ ಬರುತ್ತಿದ್ದಂತೆ ಬೆಂಗಳೂರು ಮೆಟ್ರೋ ಜಾಲವು ಒಟ್ಟು 103.6 ಕಿ.ಮೀ ಉದ್ದಕ್ಕೆ ವಿಸ್ತರಣೆಯಾಗಲಿದ್ದು, 100 ಕಿ.ಮೀ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ರಾಜಧಾನಿ ದೆಹಲಿಯ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ನೆಟ್‌ವರ್ಕ್ ಹೊಂದಿದ ನಗರವಾಗಿ ಬೆಂಗಳೂರು ಹೊರಹೊಮ್ಮಲಿದೆ.
ಕಳೆದ ದಶಕದಲ್ಲಿ 15 ಪಟ್ಟು ವಿಸ್ತರಣೆ ಕಂಡ ಜಾಲ
ಈ ಮಹತ್ವದ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಇದು ಬೆಂಗಳೂರಿಗೆ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. 2014ರಲ್ಲಿ ನಗರದಲ್ಲಿ ಕೇವಲ 7 ಕಿ.ಮೀ ಉದ್ದದ ಮೆಟ್ರೋ ಸಂಪರ್ಕ ಮಾತ್ರ ಇತ್ತು. ಆದರೆ ಕೇಂದ್ರ ಸರ್ಕಾರದ ನಿರಂತರ ಕಾಳಜಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಒತ್ತುವಿಕೆಯಿಂದಾಗಿ ಕಳೆದ ಕೆಲವೇ ವರ್ಷಗಳಲ್ಲಿ ಹೆಚ್ಚುವರಿಯಾಗಿ 96 ಕಿ.ಮೀ ಗೂ ಹೆಚ್ಚು ಮಾರ್ಗ ಸೇರ್ಪಡೆಗೊಂಡಿದೆ. ಆ ಮೂಲಕ ಜಾಲವು ಸುಮಾರು 15 ಪಟ್ಟು ಬೆಳೆದು ನಿಂತಿದೆ ಎಂದು ಅವರು ತಿಳಿಸಿದ್ದಾರೆ.
It’s official! A historic milestone for Bengaluru! 🩷
Prime Minister Shri Narendra Modi will inaugurate Namma Metro’s Pink Line on November 13. He will travel from Tavarekere to IIMB-Bilekahalli Station and launch the services.
With this, Bengaluru Metro will cross the 100 km…
— Tejasvi Surya (@Tejasvi_Surya) November 3, 2026




