BCCI ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ನೇಮಕ, ಸಮಿತಿಗೆ ರಮೇಶ್ ಪೊವಾರ್ ಸೇರ್ಪಡೆ | Pragyan Ojha

Pragyan Ojha appointed as the new chairman of the BCCI selection committee Ramesh Powar joins the committee

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಪುರುಷರ ಹಿರಿಯರ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಮಹತ್ವದ ಬದಲಾವಣೆಗಳೊಂದಿಗೆ ಪುನಾರಚಿಸಿದೆ. ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ(Pragyan Ojha) ಅವರನ್ನು ಸಮಿತಿಯ ನೂತನ ಮುಖ್ಯಸ್ಥರನ್ನಾಗಿ (ಚೇರ್‌ಪರ್ಸನ್) ಬಡ್ತಿ ನೀಡಲಾಗಿದ್ದು, ಖಾಲಿಯಿದ್ದ ಸ್ಥಾನಕ್ಕೆ ಮಾಜಿ ಆಟಗಾರ ಹಾಗೂ ಕೋಚ್ ರಮೇಶ್ ಪೊವಾರ್(Ramesh Powar) ಅವರನ್ನು ನೂತನ ಆಯ್ಕೆಗಾರರನ್ನಾಗಿ ನೇಮಕ ಮಾಡಲಾಗಿದೆ.

ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC) ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಸಂದರ್ಶನಗಳನ್ನು ನಡೆಸಿ, ರಮೇಶ್ ಪೊವಾರ್ ಅವರ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು.

ಮುಖ್ಯ ಆಯ್ಕೆಗಾರರಾಗಿ ಪ್ರಗ್ಯಾನ್ ಓಜಾ ಅಧಿಕಾರ ಸ್ವೀಕಾರ

ಅಜಿತ್ ಅಗರ್ಕರ್ ತಮ್ಮ ಒಪ್ಪಂದದ ವಿಸ್ತರಣೆಯನ್ನು ನಿರಾಕರಿಸಿದ ನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಪ್ರಗ್ಯಾನ್ ಓಜಾ ಆಯ್ಕೆಯಾಗಿದ್ದಾರೆ. ಬಿಸಿಸಿಐ ನಿಯಮಾವಳಿಯಂತೆ, ಆಡಿರುವ ಟೆಸ್ಟ್ ಪಂದ್ಯಗಳ ಸಂಖ್ಯೆ ಹಾಗೂ ಹಿರಿತನವನ್ನು (ಸೀನಿಯಾರಿಟಿ) ಮಾನದಂಡವಾಗಿಟ್ಟುಕೊಂಡು ಓಜಾ ಅವರಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ. ಅಗರ್ಕರ್ ಅವರ ಅಧಿಕಾರಾವಧಿಯಲ್ಲಿ ಭಾರತ ತಂಡವು ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿತ್ತು. ಇದೀಗ ಮುಂಬರುವ ಅಂತಾರಾಷ್ಟ್ರೀಯ ಸರಣಿಗಳು ಹಾಗೂ ಮಹತ್ವದ ಟೂರ್ನಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಂಪೂರ್ಣ ನೇತೃತ್ವವನ್ನು ಓಜಾ ವಹಿಸಿಕೊಳ್ಳಲಿದ್ದಾರೆ.

ಆಯ್ಕೆ ಸಮಿತಿಗೆ ರಮೇಶ್ ಪೊವಾರ್ ಎಂಟ್ರಿ

ಮುಂಬೈ ಮೂಲದ ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಭಾರತದ ಪರ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ನಿವೃತ್ತಿಯ ನಂತರ ತರಬೇತಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡವು ಏಷ್ಯಾ ಕಪ್ ಪ್ರಶಸ್ತಿ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಜೊತೆಗೆ ಮುಂಬೈ, ಗುಜರಾತ್ ದೇಶೀಯ ತಂಡಗಳ ಕೋಚ್ ಆಗಿ ಹಾಗೂ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅವರ ಅನುಭವ ಆಯ್ಕೆ ಪ್ರಕ್ರಿಯೆಗೆ ಹೊಸ ಆಯಾಮ ನೀಡಲಿದೆ.

ಬಿಸಿಸಿಐ ಪುರುಷರ ಹಿರಿಯ ಆಯ್ಕೆ ಸಮಿತಿಯ ಪೂರ್ಣ ವಿವರ:

  • ಪ್ರಗ್ಯಾನ್ ಓಜಾ (ಮುಖ್ಯಸ್ಥರು / ಅಧ್ಯಕ್ಷರು)

  • ಶಿವ ಸುಂದರ್ ದಾಸ್ (ಸದಸ್ಯರು)

  • ಆರ್.ಪಿ. ಸಿಂಗ್ (ಸದಸ್ಯರು)

  • ಅಜಯ್ ರಾತ್ರಾ (ಸದಸ್ಯರು)

  • ರಮೇಶ್ ಪೊವಾರ್ (ಸದಸ್ಯರು)

ವಿವಿಧ ಮಾದರಿಯ ಕ್ರಿಕೆಟ್ ಹಾಗೂ ಕೋಚಿಂಗ್ ವಿಭಾಗಗಳಲ್ಲಿ ಅಪಾರ ಅನುಭವ ಹೊಂದಿರುವ ಮಾಜಿ ಅಂತಾರಾಷ್ಟ್ರೀಯ ಆಟಗಾರರನ್ನೊಳಗೊಂಡ ಈ ಐದು ಸದಸ್ಯರ ನೂತನ ಸಮಿತಿಯು, ಮುಂದಿನ ಹಂತದ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡದ ಸಂಯೋಜನೆಯನ್ನು ಅಂತಿಮಗೊಳಿಸಲಿದೆ.