ಸಾಗರ: ಮಕ್ಕಳ ಭವಿಷ್ಯವನ್ನು ತಿದ್ದಿ ತೀಡುವ ಶಿಕ್ಷಕರ ನಿಸ್ವಾರ್ಥ ಸೇವೆ ಸಮಾಜಕ್ಕೆ ಸದಾ ಆದರ್ಶನೀಯ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪದ್ಮಾ ರಾಜೀವ್ ತಿಳಿಸಿದರು.
ಇಲ್ಲಿನ ಜಂಬಗಾರು ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕಿಯರಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸಮಾಜ ನಿರ್ಮಾಣದ ನಿಜವಾದ ಶಿಲ್ಪಿಗಳಾದ ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಎಲೆಮರೆಯ ಕಾಯಿಯಂತೆ ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕಿಯರಿಗೆ ಸನ್ಮಾನ, ಮಕ್ಕಳಿಗೆ ಬಹುಮಾನ ವಿತರಣೆ
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಶೋಭಾ ನಾಯಕ್, ನಾಜಿಮಾ ಮತ್ತು ರಶ್ಮಿ ಅವರನ್ನು ಇನ್ನರ್ ವೀಲ್ ಕ್ಲಬ್ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ‘ಶಿಕ್ಷಕರು ನಮಗೆಷ್ಟು ಗೊತ್ತು?’ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಅತ್ಯುತ್ತಮವಾಗಿ ಮಾತನಾಡಿದ ವಿಜೇತ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಭವಾನಿ ಪುಟ್ಟಪ್ಪ, ಖಜಾಂಚಿ ಡಾ. ರಾಜನಂದಿನಿ ಕಾಗೋಡು, ಪ್ರಮುಖ ಸದಸ್ಯೆಯರಾದ ಶಿವಲೀಲಾ ಮಲ್ಲಿಕಾರ್ಜುನ, ಅಕ್ಕಮಹಾದೇವಿ, ವಿಜೇತಾ ಜಗದೀಶ್, ಶರಣ್ಯ ನವೀನ್, ಪೂರ್ಣಿಮಾ ಗುರುಪ್ರಸಾದ್, ವನಿತಾ ಜಗದೀಶ್ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು..




