ಮನಿಲಾದಲ್ಲಿ ಕ್ವಾಡ್ ಸಭೆ; ಟ್ರಂಪ್ ಭಾಗವಹಿಸುವಿಕೆ ಖಚಿತ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಿಲಿಪೈನ್ಸ್ ಭೇಟಿಯ ವೇಳೆ ಮನಿಲಾದಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರ ಸಭೆಯಲ್ಲಿ ಇಂಡೋ-ಪೆಸಿಫಿಕ್ ಭದ್ರತೆ, ಶಾಂತಿ, ಕಡಲ ಭದ್ರತೆ, ಇಂಧನ ಮತ್ತು ನಿರ್ಣಾಯಕ ಖನಿಜಗಳ ಕುರಿತು ಚರ್ಚೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ಕುರಿತು ಯಾವುದೇ ಮಾಹಿತಿ ಪ್ರಕಟವಾಗಿಲ್ಲ.

ಟ್ರಂಪ್ ಫಿಲಿಪೈನ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ಅಮೆರಿಕ-ಆಸಿಯಾನ್ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಬಳಿಕ ಚೀನಾಕ್ಕೆ ತೆರಳಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ.

ಈ ಭೇಟಿಯ ವೇಳೆ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಟ್ರಂಪ್, ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ ಯಾವುದೇ ಒಪ್ಪಂದದ ನಿರೀಕ್ಷೆಯಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.