ಯೆಮನ್‌ನಲ್ಲಿ ನಾಗರಿಕರ ಮೇಲಿನ ದಾಳಿ ಹೆಚ್ಚಳ; ವಿಶ್ವಸಂಸ್ಥೆ ಕಳವಳ

ನ್ಯೂಯಾರ್ಕ್: ಯೆಮನ್‌ನಲ್ಲಿ ನಾಗರಿಕರು ಮತ್ತು ಮೂಲಸೌಕರ್ಯಗಳ ಮೇಲಿನ ಡ್ರೋನ್‌, ಕ್ಷಿಪಣಿ ಹಾಗೂ ವಾಯುದಾಳಿಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಕ್ಕಳು ಸೇರಿದಂತೆ ಹಲವರು ಸಾವನ್ನಪ್ಪುತ್ತಿದ್ದು, ಆಸ್ಪತ್ರೆ, ಮಾರುಕಟ್ಟೆ ಮತ್ತು ಮನೆಗಳೂ ದಾಳಿಗೆ ತುತ್ತಾಗುತ್ತಿವೆ.

ಎಲ್ಲ ಸಂಘರ್ಷದ ಪಕ್ಷಗಳು ಅಂತರರಾಷ್ಟ್ರೀಯ ಕಾನೂನು ಪಾಲಿಸಿ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

ಹೌತಿ ವಶದಲ್ಲಿದ್ದಾಗ ಮೃತಪಟ್ಟ ವಿಶ್ವಸಂಸ್ಥೆ ಸಿಬ್ಬಂದಿ ಮೊಹಮ್ಮದ್ ಇಬ್ರಾಹಿಂ ಅಲ್-ಶಾಮಿ ಅವರ ಸಾವಿನ ಕುರಿತು ತನಿಖೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ. ಹೌತಿ ವಶದಲ್ಲಿರುವ ಸುಮಾರು 70 ವಿಶ್ವಸಂಸ್ಥೆ ಮತ್ತು ಮಾನವೀಯ ನೆರವು ಸಿಬ್ಬಂದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಕೋರಿದೆ.

ಇದೇ ವೇಳೆ, ಯೆಮನ್ ಮೇಲಿನ ನಿರ್ಬಂಧಗಳನ್ನು 2027ರ ನವೆಂಬರ್ 14ರವರೆಗೆ ವಿಸ್ತರಿಸಲು ಭದ್ರತಾ ಮಂಡಳಿ ನಿರ್ಧರಿಸಿದೆ. ನಿರ್ಬಂಧಗಳ ಮೇಲ್ವಿಚಾರಣಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ನಾಲ್ಕರಿಂದ ಆರಕ್ಕೆ ಹೆಚ್ಚಿಸಲಾಗಿದೆ. ಸೌದಿ ಅರೇಬಿಯಾ ಮೇಲಿನ ದಾಳಿ ಹಾಗೂ ವಾಣಿಜ್ಯ ಹಡಗುಗಳಿಗೆ ಬೆದರಿಕೆ ನಿಲ್ಲಿಸುವಂತೆಯೂ ಹೌತಿಗಳಿಗೆ ಸೂಚಿಸಲಾಗಿದೆ.