ಶಿವಮೊಗ್ಗ: ಆತ ರಾತ್ರಿ ಆದರೆ ಸಾಕು ತನ್ನ ಕೆಳ ಹಂತದ ಮಹಿಳಾ ಅಧಿಕಾರಿಗಳಿಗೆ ಅಶ್ಲೀಲ, ಅಸಭ್ಯ ಮೆಸೇಜ್. ಹೊತ್ತಲ್ಲದ ಹೊತ್ತಿನಲ್ಲಿ ಸರ್ಕಾರಿ ಮಹಿಳಾ ನೌಕರರನ್ನು ಕರೆಯಿಸಿ ಅಸಭ್ಯ ವರ್ತನೆ ತೋರಿದಾತ. ಆತನ ವರ್ತನೆಗೆ ಬೇಸತ್ತು ಈ ಕೆಲಸವೇ ಬೇಡವೆಂದು ನಲುಗಿದವರು ಅದೆಷ್ಟೋ ನೌಕರರು. ಹೀಗಿದ್ದರೂ ಭ್ರಷ್ಟ, ಹೆಣ್ಣುಬಾಕನಿಗೆ ಸಾಗರ ತಾಲ್ಲೂಕಿನ ಇಒ ಆಗೋದಕ್ಕೆ ಹೊರಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೊತೆಗೆ ಅವರನ್ನು ಮಾಡದಂತೆ ಇಲಾಖೆಯ ಮಟ್ಟದಲ್ಲಿ ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ.
ಹೌದು.. ಹೆಣ್ಣುಬಾಕ, ಭ್ರಷ್ಟ ನಾಗೇಶ್ ಬ್ಯಾಲಾಳ್ ಗೆ ಸಾಗರದ ಇಒ ಹುದ್ದೆ? ನಾಗೇಶ್ ಬ್ಯಾಲಾಳ್ ಎಂಬುವರನ್ನು ಹೀಗಿದ್ದರೂ ಸಾಗರದ ತಾಲ್ಲೂಕು ಪಂಚಾಯ್ತಿಯ ಕಾರ್ಯ ನಿರ್ವಾಹಕ ಅಧಿಕಾರಿ (EO) ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ 2024ರಲ್ಲಿ ಪ್ರಭಾರ ಇಓ ಆಗಿದ್ದಂತ ಸಂದರ್ಭದಲ್ಲಿ ಹಲವಾರು ಮಹಿಳಾ ನೌಕರರಿಗೆ ಅಶ್ಲೀಲ, ಅಸಭ್ಯ ಮೆಸೇಜ್ ಕಳುಹಿಸಿದ ಆರೋಪವು ನಾಗೇಶ್ ಬ್ಯಾಲಾಳ್ ವಿರುದ್ಧ ಕೇಳಿ ಬಂದಿತ್ತು. ಈ ಕಾರಣದಿಂದ ಕೆಲವೇ ದಿನಗಳಲ್ಲಿ ಅವರನ್ನು ಆ ಹುದ್ದೆಯಿಂದ ಕೆಳಗೂ ಇಳಿಸಲಾಗಿತ್ತು.
ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ರಾತ್ರಿ ಹೊತ್ತಿನಲ್ಲಿ ಮನೆಗೆ ಕರೆಸಿಕೊಂಡು ಅವರನ್ನು ಕೆಲಸದಿಂದ ವಜಾ ಮಾಡುತ್ತೇನೆ. ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿ ಕಿರುಕುಳ ನೀಡಿದ ಆರೋಪವೂ ನಾಗೇಶ್ ಬ್ಯಾಲಾಳ್ ಮೇಲಿದೆ ಎನ್ನಲಾಗುತ್ತಿದೆ.
ಇದಷ್ಟೇ ಅಲ್ಲದೇ ಇಲಾಖೆಯ ನೌಕರರಿಂದಲೇ ಹಣ ವಸೂಲಿ, ಮನೆಗೆ ಬೇಕಾದ ವಸ್ತು ಖರೀದಿ. ಗುತ್ತಿಗೆದಾರರಿಗೆ ಹಣಕ್ಕೆ ಬೇಡಿಕೆ. ಶಾಸಕರ ಹೆಸರು ಬಳಸಿ ಸಾರ್ವಜನಿಕರಿಂದ ಹಣ ವಸೂಲಿಯಂತ ಆರೋಪಗಳು ನಾಗೇಶ್ ಬ್ಯಾಲಾಳ್ ಅವರ ಮೇಲಿದೆ ಎಂದು ಇಲಾಖೆಯ ಮೂಲಗಳ ಮಾಹಿತಿಯಾಗಿದೆ.
ಸ್ವ ಸಹಾಯ ಸಂಘದ ಪ್ರಗತಿ ಪರಿಶೀಲನೆ ಹೆಸರಿನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆಯನ್ನು ತೋರಿದ್ದರು ಎನ್ನಲಾಗಿದೆ. ಭ್ರಷ್ಟಾಚಾರಿ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೂಡ ನೀಡಲು ಹಲವರು ಮುಂದಾಗಿದ್ದರು ಎನ್ನಲಾಗುತ್ತಿದೆ.
ಶಾಸಕರ ಹಳೆಯ ಪತ್ರವಿಡಿದು ಕೆಲಸ ಸಾಧಿಸಲು ಮುಂದು.?
ಈ ಹಿಂದೆ ಸಾಗರ ತಾಲ್ಲೂಕಿನ ಇಒ ಆಗಿದ್ದಂತ ಶಣೈ ಅವರನ್ನು ವರ್ಗಾವಣೆ ಮಾಡಿದಂತ ಸಂದರ್ಭದಲ್ಲಿ ತುರ್ತಾಗಿ ಇಒ ಬೇಕಿದ್ದ ಕಾರಣ ನಾಗೇಶ್ ಬ್ಯಾಲಾಳ್ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೂಚಿಸಿದ್ದರು. ಆದರೆ ನಾಗೇಶ್ ಬ್ಯಾಲಾಳ್ ನಡೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತ ಸಿಇಒ ಅದಕ್ಕೆ ಸಮ್ಮತಿಸಿರಲಿಲ್ಲ. ಬದಲಾಗಿ ಕೃಷಿ ಇಲಾಖೆಯ ಶಿವಕುಮಾರ್ ಅವರನ್ನು ಒಪ್ಪಿಸಿ ಸಾಗರ ತಾಲ್ಲೂಕು ಇಒ ಆಗಿ ನೇಮಿಸಿದ್ದರು.
ಇದೀಗ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಈ ಹಿಂದೆ ನಾಗೇಶ್ ಬ್ಯಾಲಾಳ್ ಅವರನ್ನು ಇಒ ಮಾಡಿ ಅಂತ ನೀಡಿದ್ದಂತ ಶಿಫಾರಸ್ಸು ಪತ್ರವನ್ನು ಹಿಡಿದು ಈಗ ಇಒ ಆಗೋದಕ್ಕೆ ಹೊರಟಿದ್ದಾರೆ ಎಂಬುದಾಗಿ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಶಾಸಕರನ್ನು ಓವರ್ ಟೇಕ್ ಮಾಡಿ ಸರ್ಕಾರದ ಹಂತದಲ್ಲಿ ನಾಗೇಶ್ ಬ್ಯಾಲಾಳ್ ಸಾಗರದ ಇಒ ಹುದ್ದೆ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ನಾಗೇಶ್ ಬ್ಯಾಲಾಳ್ ನೇಮಕವಾದರೇ ಸಾಗರದ ಜನಪ್ರತಿನಿದಿಗಳಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೂ ಕೆಟ್ಟ ಹೆಸರು.
ನಾಗೇಶ್ ಬ್ಯಾಲಾಳ್ ಸಾಗರ ಇಒ ಮಾಡದಂತೆ ಹೆಚ್ಚಿದ ಒತ್ತಾಯ
ಭ್ರಷ್ಟ ಅಧಿಕಾರಿ, ಮಹಿಳಾ ನೌಕರರೊಂದಿಗೆ ಸರಿಯಾದ ನಡೆಯನ್ನು ತೋರದ ನಾಗೇಶ್ ಬ್ಯಾಲಾಳ್ ಅವರನ್ನು ಸಾಗರ ಇಒ ಮಾಡದಂತೆ ಹಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಒಂದು ವೇಳೆ ಸಾಗರದ ಇಒ ಆದರೆ ಇಲಾಖೆಗೂ ಕೆಟ್ಟ ಹೆಸರು ಎಂಬುದು ಸಾಗರದ ಜನತೆಯ ಮಾತು. ಜೊತೆ ಜೊತೆಗೆ ಇಒ ಆದ ಕೆಲವೇ ದಿನಗಳಲ್ಲಿ ಅವರು ಲೋಕಾಯುಕ್ತದಿಂದ ಟ್ರ್ಯಾಪ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯು ದುಡುಕಿನ ಹೆಜ್ಜೆ ಇರಿಸದೇ ಉತ್ತಮ ನಿರ್ಧಾರ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.




