ರೈತರ ಬದುಕಿಗೆ ಭರವಸೆ, ಕೃಷಿಗೆ ಬಲ: ಧಾರವಾಡ ಜಿಲ್ಲೆಯ 99,412 ರೈತರಿಗೆ ₹19.88 ಕೋಟಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ನೆರವು

ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಯೋಜನೆಯ 24ನೇ ಕಂತಿನಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತಲಾ ₹2,000 ಜಮೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದೇಶಾದ್ಯಂತ 9.34 ಕೋಟಿಗೂ ಅಧಿಕ ರೈತ ಫಲಾನುಭವಿಗಳಿಗೆ ಒಟ್ಟು ₹18,680 ಕೋಟಿ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಏಕಕಾಲದಲ್ಲಿ ವರ್ಗಾಯಿಸಲಾಗಿದೆ. ಧಾರವಾಡ ಜಿಲ್ಲೆಯ 99,412 ರೈತರಿಗೆ ಒಟ್ಟು ₹19.88 ಕೋಟಿ ಹಣ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೃಷಿ ವೆಚ್ಚಗಳಿಗೆ ಸಕಾಲದಲ್ಲಿ ಆರ್ಥಿಕ ಆಸರೆ ಒದಗಿಸುವ ಈ ಯೋಜನೆಯು ರೈತ ಕುಟುಂಬಗಳಿಗೆ ನೆರವಾಗುವುದರ ಜೊತೆಗೆ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದರಿಂದ ಕೃಷಿ ವಲಯಕ್ಕೆ ಮತ್ತಷ್ಟು ಚೈತನ್ಯ ದೊರೆಯಲಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ರೈತರ ಆರ್ಥಿಕ ಸಬಲೀಕರಣ, ಕೃಷಿ ವಲಯದ ಅಭಿವೃದ್ಧಿ ಹಾಗೂ ಅನ್ನದಾತರ ಬದುಕಿನಲ್ಲಿ ಆರ್ಥಿಕ ಭದ್ರತೆ ಮೂಡಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.