ಬೆಂಗಳೂರು: ಬರಪೀಡಿತ ಪ್ರದೇಶಗಳ ರೈತರಿಗೆ ಎಕರೆಗೆ ₹25 ಸಾವಿರ ಬೆಳೆ ನಷ್ಟ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಧ್ಯಮ ಪ್ರಕಟಣೆ ಮೂಲಕ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಅವರು, ಬರಪೀಡಿತ ತಾಲೂಕುಗಳಲ್ಲಿ ರೈತರ ರಕ್ಷಣೆಗಾಗಿ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕೈಗಾರಿಕೆಗಳು ನಷ್ಟ ಅನುಭವಿಸಿದಾಗ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಬಾರದು ಎಂದಿದ್ದಾರೆ.
ಶಾಸಕರು, ಸಚಿವರು ವೇತನ ತ್ಯಜಿಸಿ
ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರದ ಬಳಿ ಹಣದ ಕೊರತೆಯಿದ್ದರೆ ಶಾಸಕರು ಹಾಗೂ ಸಚಿವರು ತಮ್ಮ ವೇತನವನ್ನು ತ್ಯಜಿಸಿ ರೈತರ ನೆರವಿಗೆ ನಿಲ್ಲಬೇಕು ಎಂದು ಶಾಂತಕುಮಾರ್ ಹೇಳಿದ್ದಾರೆ.

ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮೇವು ಬ್ಯಾಂಕ್ಗಳನ್ನು ತೆರೆಯಬೇಕು ಹಾಗೂ ಅಗತ್ಯ ಪ್ರಮಾಣದಲ್ಲಿ ಮೇವು ಪೂರೈಸಬೇಕು. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಮೇವು ಪೂರೈಸಲು ಸಾಧ್ಯವಿಲ್ಲ; ಇದಕ್ಕೂ ರೈತರ ಶ್ರಮ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವಲಸೆ ತಡೆಯಲು ಉದ್ಯೋಗ
ಬರದಿಂದ ರೈತರು ಗ್ರಾಮಗಳಿಂದ ವಲಸೆ ಹೋಗುವುದನ್ನು ತಪ್ಪಿಸಲು ತಕ್ಷಣ ಎನ್ಆರ್ಇಜಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ಹಾಗೂ ಆದಾಯದ ನೆರವು ನೀಡಬೇಕು. ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನಷ್ಟು ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಯುತ್ತಿದೆ.
ರೈತರ ಸಂಕಷ್ಟದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಆಡಳಿತ ಮತ್ತು ರಾಜಕೀಯ ಪಕ್ಷಗಳ ನಡೆ ಜನರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸರ್ಕಾರ ಹಾಗೂ ವಿರೋಧ ಪಕ್ಷಗಳು ರೈತರ ಪರ ಪ್ರಾಮಾಣಿಕ ನೀತಿ ಅನುಸರಿಸಬೇಕು ಎಂದು ಶಾಂತಕುಮಾರ್ ಒತ್ತಾಯಿಸಿದ್ದಾರೆ.



