ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ: ಮಿನಿ ಬಸ್ – ಕಂಟೈನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ 23 ಮಂದಿ ದುರ್ಮರಣ | Road Accident

Horrible road accident in Assam 23 killed in mini bus-container lorry head-on collision

ಗುವಾಹಟಿ: ಅಸ್ಸಾಂನ(Assam) ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಕಂಟೈನರ್ ಲಾರಿ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ(Road accident) ಉಂಟಾಗಿದೆ. ಈ ಮುಖಾಮುಖಿ ಡಿಕ್ಕಿಯಲ್ಲಿ 23 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಘಟನೆ ನಡೆದಿದ್ದು ಹೇಗೆ? ಅತಿವೇಗವೇ ಮುಳುವಾಯಿತೇ?

ಮಿನಿ ಬಸ್ ಬೊಕಾಖಾಟ್‌ನಿಂದ (Bokakhat) ನಾಗಾಂವ್ (Nagaon) ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಉದ್ಯಾನವನದ ಸಮೀಪ ವಿಧಿಸಲಾಗಿರುವ ವೇಗದ ನಿರ್ಬಂಧಗಳನ್ನು ಉಲ್ಲಂಘಿಸಿ ಮಿನಿ ಬಸ್ ಅತಿ ವೇಗವಾಗಿ ಚಲಿಸುತ್ತಿತ್ತು ಎಂದು ಗೋಲಾಘಾಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಸ್ವಪ್ನನೀಲ್ ದೇಕಾ ತಿಳಿಸಿದ್ದಾರೆ. ಅತಿ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ಎದುರಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅನೇಕ ಪ್ರಯಾಣಿಕರು ವಾಹನದ ಒಳಗೇ ಸಿಲುಕಿಕೊಂಡಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಹೆಚ್ಚಿನ ಚಿಕಿತ್ಸೆಗೆ ಜೋರ್ಹತ್ ಆಸ್ಪತ್ರೆಗೆ ರವಾನೆ

ಅಪಘಾತದ ಸದ್ದು ಕೇಳುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಕೊಹೊರಾ ಮಾದರಿ ಆಸ್ಪತ್ರೆಗೆ (Kohora Model Hospital) ದಾಖಲಿಸಲಾಗಿದ್ದು, ಅವರಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದ ಬಹುತೇಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (JMCH) ರವಾನಿಸಲಾಗಿದೆ. ನಜ್ಜುಗುಜ್ಜಾದ ಬಸ್‌ನಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಇನ್ನೂ ಮುಂದುವರಿದಿದೆ.

ಸ್ಥಳಕ್ಕೆ ಸಚಿವ ಅತುಲ್ ಬೋರಾ ಭೇಟಿ, ಎಸ್‌ಪಿ ಹೇಳಿದ್ದೇನು?

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಎಸ್‌ಎಸ್‌ಪಿ ಸ್ವಪ್ನನೀಲ್ ದೇಕಾ, “ಪ್ರಾಥಮಿಕ ವರದಿಯ ಪ್ರಕಾರ ಅಪಘಾತದಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ನಾವೆಲ್ಲರೂ ಘಟನಾ ಸ್ಥಳದಲ್ಲೇ ಇದ್ದು, ಬಸ್‌ನೊಳಗಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ” ಎಂದು ಮಾಹಿತಿ ನೀಡಿದ್ದಾರೆ. ಅಪಘಾತದ ವೇಳೆ ಮಿನಿ ಬಸ್‌ನಲ್ಲಿ ನಿಖರವಾಗಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಇನ್ನು, ಸ್ಥಳೀಯ ಶಾಸಕರೂ ಆಗಿರುವ ಅಸ್ಸಾಂ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಅತುಲ್ ಬೋರಾ ಅವರು ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ