ಭಾರತ-ನೇಪಾಳ ಬಾಂಧವ್ಯ ವೃದ್ಧಿ; ಬೌದ್ಧ ಮತ್ತು ರಾಮಾಯಣ ಪ್ರವಾಸೋದ್ಯಮ ಮಾರ್ಗಗಳ ಅಭಿವೃದ್ಧಿ ಬಗ್ಗೆ ಚರ್ಚೆ

ಕಠ್ಮಂಡು: ನೇಪಾಳದ ನೂತನ ಭಾರತೀಯ ರಾಯಭಾರಿ ಸುಧಾಕರ್ ದಲೇಲಾ ಅವರು ನೇಪಾಳದ ಇಬ್ಬರು ಸಚಿವರು ಹಾಗೂ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಕುರಿತು ಮಾತುಕತೆ ನಡೆಸಿದ್ದಾರೆ.

ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರ ಮುಂಬರುವ ನವದೆಹಲಿ ಭೇಟಿಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವ ಖಡಕ್ ರಾಜ್ ಪೌಡೆಲ್ ಅವರೊಂದಿಗೆ ಪ್ರವಾಸೋದ್ಯಮ ಹಾಗೂ ವಿಮಾನ ಸಂಪರ್ಕ ವಿಸ್ತರಣೆ ಕುರಿತು ಚರ್ಚಿಸಿದ ದಲೇಲಾ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಸುನಿಲ್ ಲಮ್ಸಾಲ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಬಗ್ಗೆ ಮಾತುಕತೆ ನಡೆಸಿದರು.

ಅಯೋಧ್ಯೆ-ಜನಕಪುರ ನಡುವೆ ವಿಶೇಷ ರೈಲು ಸೇವೆ, ಬೌದ್ಧ ಮತ್ತು ರಾಮಾಯಣ ಪ್ರವಾಸೋದ್ಯಮ ಮಾರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಪೋಖರಾ ಮತ್ತು ಗೌತಮ ಬುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಭಾರತೀಯ ನಗರಗಳಿಗೆ ನೇರ ವಿಮಾನ ಸೇವೆ ಆರಂಭಿಸುವಂತೆ ನೇಪಾಳ ಮನವಿ ಮಾಡಿದೆ. ವಿಮಾನಯಾನ ಸುರಕ್ಷತೆ ಮತ್ತು ತಾಂತ್ರಿಕ ಸಹಕಾರದ ಬಗ್ಗೆಯೂ ಚರ್ಚೆ ನಡೆಯಿತು.

ವಿದೇಶಾಂಗ ಕಾರ್ಯದರ್ಶಿ ಅಮೃತ್ ಬಹದ್ದೂರ್ ರೈ ಅವರನ್ನೂ ದಲೇಲಾ ಭೇಟಿಯಾದರು. ನವೆಂಬರ್ 6ರಂದು ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರಿಗೆ ಅವರು ತಮ್ಮ ಅಧಿಕಾರ ಪತ್ರ ಸಲ್ಲಿಸಿದ್ದರು.