ಇಸ್ರೋ ಕಚೇರಿ ಉಡಾಯಿಸುವುದಾಗಿ ಇ-ಮೇಲ್ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಇಸ್ರೋ ಮುಖ್ಯ ಕಚೇರಿಗೆ ಸ್ಫೋಟಕ ಇಟ್ಟಿರುವುದಾಗಿ ಇ-ಮೇಲ್ ಮುಖಾಂತರ ಸೃಷ್ಟಿಸಲಾಗಿದ್ದ ಬಾಂಬ್ ಆತಂಕದ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆದರಿಕೆ ಸಂದೇಶ ಬಂದ ಕೇವಲ ಒಂದು ದಿನದ ಒಳಗಾಗಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂಜಯ್ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ

ಬಾಹ್ಯಾಕಾಶ ಸಂಸ್ಥೆಗೆ ಬಂದಿದ್ದ ಇ-ಮೇಲ್ ಜಾಡು ಹಿಡಿದು ತನಿಖೆ ಆರಂಭಿಸಿದ್ದ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಸಿಬ್ಬಂದಿ ಉತ್ತರ ಪ್ರದೇಶದಲ್ಲಿ ತಪಾಸಣೆ ನಡೆಸಿದ್ದರು. ಈ ಹುಸಿ ಬಾಂಬ್ ಸಂದೇಶವು ಉತ್ತರ ಪ್ರದೇಶದಿಂದ ರವಾನೆಯಾಗಿರುವುದು ತಾಂತ್ರಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಗಾಜಿಯಾಬಾದ್ ನಿವಾಸಿಯಾದ ನಿಶಾಂತ್ ತ್ಯಾಗಿ (36) ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ.

ಡಿಜಿಟಲ್ ಸಾಕ್ಷ್ಯ ಪತ್ತೆ; ಆರೋಪಿ ಮಾನಸಿಕ ಅಸ್ವಸ್ಥ

ಬಂಧಿತ ನಿಶಾಂತ್ ತ್ಯಾಗಿಯ ಬಳಿಯಿದ್ದ ಮೊಬೈಲ್ ಅನ್ನು ವಶಪಡಿಸಿಕೊಂಡು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ, ಆತನ ಫೋನ್‌ನಿಂದಲೇ ಇಸ್ರೋಗೆ ಬೆದರಿಕೆ ಇ-ಮೇಲ್ ಹೋಗಿರುವುದು ಡಿಜಿಟಲ್ ಸಾಕ್ಷ್ಯಗಳ ಸಮೇತ ದೃಢಪಟ್ಟಿದೆ. ಸದ್ಯ ಸೆರೆಸಿಕ್ಕಿರುವ ಆರೋಪಿ ನಿಶಾಂತ್ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ವಿಚಾರ ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.