ಸಾಗರದಲ್ಲಿ ಚಿಕಿತ್ಸೆ ಫಲಿಸದೆ ನಾಲ್ಕು ತಿಂಗಳ ಚಿರತೆಮರಿ ಸಾವು; ತಹಶೀಲ್ದಾರ್ ಡಾ.ಪ್ರತಿಭಾ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾಣಿ ಶಾಖೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ತಿಂಗಳ ಪುಟ್ಟ ಚಿರತೆಮರಿಯೊಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮೃತ ಚಿರತೆಮರಿಯ ಮರಣೋತ್ತರ ಪರೀಕ್ಷೆ ನಡೆಸಿ, ಸಾಗರ ತಾಲೂಕಿನ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರ ನೇರ ಸಮ್ಮುಖದಲ್ಲಿ ಇಂದು ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

​ರಾತ್ರಿಯಿಡೀ ನಡೆದ ರಕ್ಷಣಾ ಕಾರ್ಯಾಚರಣೆ

​ಮುಪ್ಪಾನೆ ಗಸ್ತು ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಸರ್ವೇ ನಂಬರ್ 44ರಲ್ಲಿರುವ ಯೋಗರಾಜ್ ಎಂಬುವವರ ಅಡಿಕೆ ತೋಟದ ಬಳಿ ನಿನ್ನೆ ರಾತ್ರಿ ಚಿರತೆಮರಿಯೊಂದು ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿತ್ತು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ, ಮೂಕ ಜೀವದ ಸುರಕ್ಷತೆ ಹಾಗೂ ತುರ್ತು ಚಿಕಿತ್ಸೆಯ ಹಿತದೃಷ್ಟಿಯಿಂದ ಅದನ್ನು ಸಸಿ ಚೌಕ ಕಳ್ಳಬೇಟೆ ನಿಗ್ರಹ ಶಿಬಿರಕ್ಕೆ ತಂದು ಅಗತ್ಯ ಚಿಕಿತ್ಸೆ ಕೊಡಿಸಿದ್ದರು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಚಿರತೆಮರಿ ಕೊನೆಯುಸಿರೆಳೆದಿದೆ.

​ಬೆನ್ನುಮೂಳೆ ಮುರಿತ, ನಂಜು ಸಾಡಿಗೆ ಕಾರಣ?

​ಪ್ರಾಥಮಿಕ ವರದಿಗಳ ಪ್ರಕಾರ, ಚಿರತೆಮರಿಯ ಬೆನ್ನಿನ ಮೂಳೆ ಹಾಗೂ ಕಾಲುಗಳು ಮುರಿದಿದ್ದವು ಎನ್ನಲಾಗಿದೆ. ಗಾಯದ ತೀವ್ರತೆಯಿಂದಾಗಿ ಇಡೀ ದೇಹದಲ್ಲಿ ನಂಜು (Infection) ಉಂಟಾಗಿದ್ದೇ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪಶುವೈದ್ಯಾಧಿಕಾರಿಗಳಾದ ಡಾ. ಆಕಾಶ್ ಅವರು ಮೃತ ಚಿರತೆಮರಿಯ ಮರಣೋತ್ತರ ಪರೀಕ್ಷೆಯನ್ನು ನೆರವೇರಿಸಿದರು.

​ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಧನಂಜಯ ನಾಯಕ್, ರೆವೆನ್ಯೂ ಇನ್ಸ್ಪೆಕ್ಟರ್ ಬೀರಪ್ಪ ಹಾಗೂ ಗ್ರಾಮ ಆಡಳಿತ ಅಧಿಕಾರಿ ಯಲ್ಲಾಲಿಂಗ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು, ನಿಯಮಾನುಸಾರ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು.

ವನ್ಯಜೀವಿಗಳ ಜೀವ ರಕ್ಷಣೆಗೆ ಎಚ್ಚರಿಕೆ ವಹಿಸಲು ತಹಶೀಲ್ದಾರ್ ಸೂಚನೆ

​”ಕಾರ್ಗಲ್ ಅರಣ್ಯ ವಲಯದಲ್ಲಿ ನಿನ್ನೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಮಾರು ನಾಲ್ಕು ತಿಂಗಳ ಚಿರತೆ ಮರಿಯನ್ನು ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದರು. ಆದರೆ ತೀವ್ರವಾದ ಗಾಯಗಳಿಂದಾಗಿ ನಂಜು ಉಂಟಾಗಿ ಇಂದು ಬೆಳಿಗ್ಗೆ ಅದು ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ವನ್ಯಜೀವಿಗಳು ಅಕಾಲಿಕ ಸಾವಿಗೆ ಈಡಾಗದಂತೆ ಸದಾ ಜಾಗರೂಕರಾಗಿರಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.”

– ಡಾ. ಪ್ರತಿಭಾ ಆರ್., ತಹಶೀಲ್ದಾರ್, ಸಾಗರ ತಾಲೂಕು.

​ಕಾಡಿನ ಪ್ರಾಣಿಯಾದರೂ ಅದಕ್ಕೊಂದು ಸೂಕ್ತ ಚಿಕಿತ್ಸೆ ಕೊಡಿಸಿ, ಮರಣದ ನಂತರವೂ ಜವಾಬ್ದಾರಿಯುತ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿರುವುದು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಮಾನವೀಯ ನಡೆಗೆ ಹಿಡಿದ ಕೈಗನ್ನಡಿಯಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು..