ಸಾಗರದಲ್ಲಿ ‘ಮರಗಳ ಅಕ್ರಮ ಸಾಗಾಟ’: ತನಿಖೆಗೆ ಆದೇಶಿಸಿದ ‘ಸಚಿವ ಈಶ್ವರ ಖಂಡ್ರೆ’, ಅರಣ್ಯಾಧಿಕಾರಿಗಳ ತಲೆದಂಡ ಫಿಕ್ಸ್

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಗ್ರಾಮದ ಬಳಿ ನಡೆದಿದೆ ಎನ್ನಲಾದ ಬೃಹತ್ ಮರಗಳ ಅಕ್ರಮ ಕಳ್ಳಸಾಗಾಣಿಕೆ ಪ್ರಕರಣವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ 7 ದಿನಗಳ ಒಳಗಾಗಿ ವರದಿ ನೀಡುವಂತೆ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಅವಿನಹಳ್ಳಿ ಗ್ರಾಮದ ಬಳಿ KA 34 A 3896 ಸಂಖ್ಯೆಯ ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಮರಗಳನ್ನು ಗ್ರಾಮಸ್ಥರೇ ತಡೆದು ವಿಚಾರಿಸಿದಾಗ, ಯಾವುದೇ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 25ಕ್ಕೂ ಹೆಚ್ಚು ಲೋಡ್ ಪಲ್ಪ್ ವುಡ್ ಮತ್ತು ಟಿಂಬರ್ ಅನ್ನು ಕದ್ದು ಸಾಗಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಚಿವರ ಪತ್ರದಲ್ಲಿನ ಪ್ರಮುಖ ಅಂಶಗಳು:

  • ಹಳೆಯ ಮರಗಳ ಲೂಟಿ: ಲಾರಿಯಲ್ಲಿ ಸಾಗಿಸುತ್ತಿದ್ದ ಮರಗಳು ಸುಮಾರು 30-40 ವರ್ಷಗಳಷ್ಟು ಹಳೆಯದಾಗಿವೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

  • ಅಧಿಕಾರಿಗಳ ಶಾಮೀಲು ಶಂಕೆ: ಈ ಅಕ್ರಮ ಕಟಾವು ಮತ್ತು ಸಾಗಾಣಿಕೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

  • ಉನ್ನತ ಮಟ್ಟದ ತನಿಖೆ: ಎ.ಪಿ.ಸಿ.ಸಿ.ಎಫ್. (APCCF) ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಸಮಗ್ರ ತನಿಖೆ ನಡೆಸಲು ಸಚಿವರು ಆದೇಶಿಸಿದ್ದಾರೆ.

7 ದಿನಗಳ ಗಡುವು:

ತನಿಖಾ ವರದಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಕರ್ತವ್ಯ ಲೋಪ ಕಂಡುಬಂದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ಕಡತ ಮಂಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (PCCF) ಸಚಿವರು ಸೂಚಿಸಿದ್ದಾರೆ.

ಸರ್ಕಾರವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ. ಆ ಮೂಲಕ ಅಕ್ರಮವಾಗಿ ಮರ ಸಾಗಾಟದಲ್ಲಿ ಭಾಗಿಯಾದ ಅರಣ್ಯ ಇಲಾಖೆಯ ಅಧಿಕಾರಿಗಳ ತಲೆದಂಡ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ತನಿಖೆ ನಡೆದು, ಅರಣ್ಯ ಸಚಿವರಿಗೆ ವರದಿ ಸಲ್ಲಿಕೆ ನಂತ್ರ ಯಾವ ಕ್ರಮ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.