ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ(Kolkata) ಚೋರ್ಬಾಗನ್ ಸಾರ್ವಜನಿಕ ದುರ್ಗೋತ್ಸವ ಸಮಿತಿ ಆಯೋಜಿಸಿದ್ದ ದುರ್ಗಾಪೂಜಾ ಪೆಂಡಾಲ್ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ(Kolkata Stampede) 19 ಜನರು ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ(Union Home Minister Amit Shah) ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(West Bengal Chief Minister Suvendu Adhikari) ಭಾನುವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ದುರಂತದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ತಮ್ಮ ಪಶ್ಚಿಮ ಬಂಗಾಳದ ನಿಗದಿತ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಘಟನೆ ಅತ್ಯಂತ ನೋವಿನ ಸಂಗತಿ ಎಂದು ಕಂಬನಿ ಮಿಡಿದಿರುವ ಅವರು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದು, ಗಾಯಾಳುಗಳಿಗೆ ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸಲು ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
ನಗರದ ಹಲವೆಡೆ 3 ದಿನಗಳ ಕಾಲ ನಿಷೇಧಾಜ್ಞೆ
ದುರಂತದ ಬೆನ್ನಲ್ಲೇ ನಗರದಲ್ಲಿ ಸಂಭವಿಸಬಹುದಾದ ಪ್ರತಿಭಟನೆ, ರ್ಯಾಲಿ ಮತ್ತು ಸಾರ್ವಜನಿಕ ಶಾಂತಿಭಂಗವನ್ನು ತಡೆಯಲು ಕೋಲ್ಕತ್ತಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ನಗರದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ಟೋಬರ್ 18 ರಿಂದ 20 ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್ ಅಜಯ್ ನಂದ್ ಹೊರಡಿಸಿರುವ ಆದೇಶದ ಪ್ರಕಾರ, ಬೌಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜ್ ಸ್ಟ್ರೀಟ್, ಸೆಂಟ್ರಲ್ ಅವೆನ್ಯೂ (ಸಿಆರ್ ಅವೆನ್ಯೂ), ಕೊಲೂಟೋಲಾ ಸ್ಟ್ರೀಟ್ ಹಾಗೂ ಈಡನ್ ಹಾಸ್ಪಿಟಲ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ.
ಪೂಜಾ ಸಮಿತಿ ಪದಾಧಿಕಾರಿಗಳು ಸೇರಿ 7 ಮಂದಿ ಬಂಧನ
ದುರಂತಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತವಾಗಿ (Suo moto) ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105, 110 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಸಮಿತಿಯ ಮುಖ್ಯಸ್ಥರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.




