ಚಿತ್ರದುರ್ಗ: ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಚಿತ್ರದುರ್ಗ ಮತ್ತು ಚಳ್ಳಕೆರೆಗೆ ತೆರಳುತ್ತಿದ್ದ ಸಚಿವರು, ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದ್ದ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದರು. ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಇಂದು ಸಚಿವರಾಗಿ ಆಗಮಿಸಿದ್ದನ್ನು ಕಂಡು ಮಕ್ಕಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಘುಮೂರ್ತಿ, 1967-68ರಲ್ಲಿ ಇದೇ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದು, ಏಳನೇ ತರಗತಿವರೆಗೆ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾಗಿ ಸ್ಮರಿಸಿದರು. ಈ ಶಾಲೆಯ ಶಿಕ್ಷಣವೇ ತಮ್ಮ ಮುಂದಿನ ಬದುಕಿಗೆ ಅಡಿಪಾಯ ಹಾಕಿದ್ದು, ಇಂಜಿನಿಯರ್ ಆಗುವ ಅವಕಾಶ ಕಲ್ಪಿಸಿತು ಎಂದರು. ಮಕ್ಕಳಿಗೆ ಶುಭಾಶಯ ತಿಳಿಸಿ ಸಿಹಿ ಹಂಚಿದರು.

ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಶಾಲೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಮುಖ್ಯೋಪಾಧ್ಯಾಯ ಕೆ. ಸುದರ್ಶನ ಹಾಗೂ ಶಿಕ್ಷಕರು, ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು.
ಶಾಲೆ ಮತ್ತು ಸುತ್ತಮುತ್ತಲ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಮಕ್ಕಳ ದಿನಾಚರಣೆಯಂದೇ ತಮ್ಮ ಶಾಲೆಗೆ ಭೇಟಿ ನೀಡಿರುವುದು ಜೀವನದ ಮರೆಯಲಾಗದ ಅನುಭವ ಎಂದು ಸಚಿವರು ಸಂತಸ ಹಂಚಿಕೊಂಡರು.



