ರಾಜ್ಯದ ಶಾಲಾ–ಕಾಲೇಜು ಆವರಣಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಿ ಆರೋಗ್ಯ ಇಲಾಖೆಯಿಂದ ಅಧಿಕೃತ ಆದೇಶ

ಬೆಂಗಳೂರು: ವಿದ್ಯಾರ್ಥಿಗಳಿಗೆ ಸುರಕ್ಷಿತ, ಗುಣಮಟ್ಟಯುತ ಹಾಗೂ ಆರೋಗ್ಯಕರ ಆಹಾರ ಲಭ್ಯವಾಗುವಂತೆ ಮಾಡಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಜುಲೈ 2026ರಲ್ಲಿ ರಾಜ್ಯದ 134 ಶಾಲೆಗಳು ಮತ್ತು ಕಾಲೇಜುಗಳ ಆವರಣ ಹಾಗೂ ಸುತ್ತಮುತ್ತಲಿನ ಆಹಾರ ವ್ಯಾಪಾರ ಕೇಂದ್ರಗಳಲ್ಲಿ ವಿಶೇಷ ಪರಿಶೀಲನಾ ಅಭಿಯಾನ ನಡೆಸಲಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆ, ನೈರ್ಮಲ್ಯ, ಲೇಬಲಿಂಗ್, ಅವಧಿ ಮೀರಿದ ಉತ್ಪನ್ನಗಳ ಮಾರಾಟ ಹಾಗೂ ಪರವಾನಗಿ/ನೋಂದಣಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

ಪರಿಶೀಲನೆಯ ವೇಳೆ ಸಂಶಯಾಸ್ಪದವಾಗಿ ಕಂಡುಬಂದ 53 ಆಹಾರ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಬೆಂಗಳೂರು ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಗಳ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ನಿಯಮಗಳು 2011ರ ಅನ್ವಯ ಸಂಬಂಧಿತ ವ್ಯಾಪಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರ್ಗಸೂಚಿಗಳಂತೆ, 21.07.2026ರಿಂದ ಶಾಲೆ ಮತ್ತು ಕಾಲೇಜುಗಳ ಆವರಣ ಹಾಗೂ 50 ಮೀಟರ್ ವ್ಯಾಪ್ತಿಯಲ್ಲಿ ಅನಾರೋಗ್ಯಕರ ಆಹಾರ ಮಾರಾಟವನ್ನು ನಿರುತ್ಸಾಹಗೊಳಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಸಲಹಾ ಪ್ರಕಟಣೆ ಹೊರಡಿಸಲಾಗಿದೆ.

ಈ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಲಾ–ಕಾಲೇಜು ಆಡಳಿತ ಮಂಡಳಿ, ಆಹಾರ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಪರಿಶೀಲನಾ ಅಭಿಯಾನಗಳನ್ನು ಮುಂದುವರೆಸುವುದಾಗಿ ಇಲಾಖೆ ತಿಳಿಸಿದೆ.