ಬೆಂಗಳೂರು: ಕಮೀಷನ್ ಆರೋಪ ಸಹಿತ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕರ್ನಾಟಕದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಾಗಲೇ, ರಾಜ್ಯ ಸರ್ಕಾರದ ನಾಗರಾಭಿವೃದ್ದಿ ಇಲಾಖೆ ಅಧಿಕಾರಿಗಳ ನಡೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ದೇಶದಲ್ಲಿ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆಯು ತಮ್ಮ ಇಲಾಖೆಗೆ ಅನ್ವಯವಾಗುವುದಿಲ್ಲ ಎಂಬಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. RTI ಅರ್ಜಿ ಸ್ವೀಕೃತಿಗೂ ಮಂತ್ರಿಗಳ ಶಿಫಾರಸು ಬೇಕೇ ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ಅಷ್ಟಕ್ಕೂ ವಿವಾದ ಏನು ಗೊತ್ತೇ?
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ಬೇಕಾಬಿಟ್ಟಿ ಅನುದಾನ ಬಿಡುಗಡೆಯಾಗಿದೆ ಎನ್ನಲಾಗಿದೆ. ಆದರೆ ಕಾಮಗಾರಿಗಳು ನಡೆದಿರುವ ಅನುಮಾನವೂ ಇದೆ. ಹಲವೆಡೆಯ ಕಳಪೆ ಕಾಮಗಾರಿ ಆರೋಪಗಳೂ ಈಗಿನ GBA ಸಚಿವ ಕೃಷ್ಣಾ ಬೈರೇಗೌಡರನ್ನೇ ಕೆರಳಿಸಿದ್ದು, ಇತ್ತೀಚಿಗೆ ಸಭೆಗಳಲ್ಲೇ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ನಗರಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನ ವಿವರ ಹಾಗೂ ಆ ಅನುದಾನದಲ್ಲಿನ ಕಾಮಗಾರಿಗಳ ಮಾಹಿತಿಯನ್ನು RTI ಮೂಲಕ ಒದಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಈ ಕುರಿತಂತೆ ಅರ್ಜಿಗಳನ್ನೂ ಸ್ವೀಕರಿಸಲು ನಗರಾಭಿವೃದ್ಧಿ ಇಲಾಖೆ ನಿರಾಕರಿಸುತ್ತಿರುವುದು ಅಚ್ಚರಿಯ ಬೆಳವಣಿಗೆ.
ಈ ರೀತಿಯ RTI ಅರ್ಜಿಗಳನ್ನು ಹೊತ್ತೊಯ್ದ ಭ್ರಷ್ಟಾಚಾರ ಸಂಸ್ಥೆ ‘ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ನವರಿಗೆ ಕಳವಳಕಾರಿ ಅನುಭವವಾಗಿದೆ. RTI ಅರ್ಜಿಗಳನ್ನು ಸಲ್ಲಿಸಲು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ತೆರಳಿದ CRF ಪ್ರಮುಖರನ್ನು ಅಧಿಕಾರಿಗಳು ತಡೆದ ಸನ್ನಿವೇಶ ಶುಕ್ರವಾರ (ಜು.31) ನಡೆದಿದೆ. ಅರ್ಜಿಗಳನ್ನು ಪಡೆದು ಓದಿದ ನಂತರ ಅದನ್ನು ಸ್ವೀಕರಿಸದೆ ಹಿಂದಿರುಗಿಸಿದ್ದಾರೆ. ಅರ್ಜಿಯಲ್ಲಿ ವಿಳಾಸಗಳು ಸರಿಯಾಗಿಯೇ ಇವೆ. ಕೋರಿರುವ ಮಾಹಿತಿಯನ್ನೊಳಗೊಂಡ ಅರ್ಜಿಗಳು ಮಾಹಿತಿ ಹಕ್ಕು ಅಧಿನಿಯಮದ ಪರಿಭಾಷೆಗೆ ತಕ್ಕಂತೆಯೇ ಇವೆ. ಆದರೆ ಅಧಿಕಾರಿಗಳು RTI ಅರ್ಜಿಗಳನ್ನು ನಿರಾಕರಿಸಿರುವುದು ಕಾನೂನು ವಿರೋಧಿ ನಡೆ ಎಂದು CRF ಅಧ್ಯಕ್ಷ ಕೆ.ಎ.ಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ, ನಗರಾಭಿವೃದ್ಧಿ ಸಚಿವರಿಗೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿರುವ ಕೆ.ಎ.ಪಾಲ್, ತಕ್ಷಣವೇ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ತಡೆ ಹಾಗೂ ಪಾರದರ್ಶಕ ಆಡಳಿತದ ಉದ್ದೇಶದಿಂದ ಮಾಹಿತಿ ಹಕ್ಕು ಅಧಿನಿಯಮ 2005 ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹೀಗಿರುವಾಗ ಮಾಹಿತಿ ಹಕ್ಕು ಅರ್ಜಿಗಳನ್ನು ಸ್ವೀಕರಿಸದೆ ಅಧಿಕಾರಿಗಳು ಅಧಿನಿಯಮದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಅಕ್ಷಮ್ಯ.
ಅಧಿನಿಯಮ ಏನೆನ್ನುತ್ತದೆ?
ಅರ್ಜಿಯನ್ನು ಸ್ವೀಕರಿಸಿದ ನಂತರದಲ್ಲಿ, ಅದನ್ನು ಪರಿಶೀಲಿಸಿ ವಿಲೇ ಮಾಡುವ ಪ್ರಕ್ರಿಯೆಯು ನ್ಯಾಯಾಂಗದ ರೀತಿಯ ಪ್ರಕ್ರಿಯೆಯಾಗಿರುತ್ತದೆ. ಒಂದು ವೇಳೆ, RTI ಅರ್ಜಿಯು ಬೇರೆ ಪ್ರಾಧಿಕಾರದ ವಿಷಯಗಳಿಗೆ ಸಂಬಂಧಿಸಿದ್ದಾಗಿದ್ದರೆ ಅಂತಹ ಅರ್ಜಿಯನ್ನು ಕಲಾಂ 6(3) ರ ಅನ್ವಯ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿ ಕರ್ತವ್ಯ. ಒಂದೊಮ್ಮೆ, ಅರ್ಜಿಯು ಅಧಿನಿಯಮದ ಪರಿಭಾಷೆಗೆ ತಕ್ಕಂತೆ ಇಲ್ಲದಿದ್ದ ಪಕ್ಷದಲ್ಲಿ ಅರ್ಜಿಯನ್ನು ವಿಲೇ ಮಾಡುವ ಅವಕಾಶ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಇದೆ. ತಮ್ಮ ಅರ್ಜಿಯು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ಅಧಿನಿಯಮದ ಪರಿಭಾಷೆಗೆ ತಕ್ಕಂತೆಯೇ ಇದೆ. ಆದರೂ ಸಾರ್ವಜನಿಕ ಮಾಹಿತಿ ಅಧಿಕಾರಿ ಕಚೇರಿ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸದಿರುವುದು ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮರೆಮಾಚುವ ಉದ್ದೇಶದಿಂದ ಅಧಿಕಾರಿಗಳು ಈ ರೀತಿ ನಡೆದುಕೊಂಡಿದ್ದಾರೆ. RTI ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸುವುದು ಅಕ್ಷಮ್ಯ. ಅಂತಹ ನೌಕರರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹಾಗಾಗಿ RTI ಅರ್ಜಿಗಳನ್ನು ಸ್ವೀಕರಿಸಿ ಅಧಿನಿಯಮಾನುಸಾರ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕೆಂದು ನಗರಾಭಿವೃದ್ಧಿ ಸಚಿವರನ್ನು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿವರನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಹೋರಾಟಗಾರರ ಆಕ್ರೋಶ:
ರಾಜ್ಯ ಸರ್ಕಾರದ ಇಲಾಖೆಯ ಅಧಿಕಾರಿಗಳ ಈ ನಡೆ ಬಗ್ಗೆ ಸಾಮಾಜಿಕ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ನೀಟ್ ವಿಚಾರದಲ್ಲಿ ಹೋರಾಟ ನಡೆಸಿ ತಮ್ಮದು ಭ್ರಷ್ಟಾಚಾರ ವಿರೋಧಿ ಪಕ್ಷ ಎಂದು ಬಿಂಭಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಗಾಗ್ಗೆ ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸುತ್ತಿರುತ್ತಾರೆ. ಅವರಿಗೆ ಕರ್ನಾಟಕ ಸರ್ಕಾರದ ಅಧಿಕಾರಿಗಳ ಕಾನೂನು ವಿರೋಧಿ ನಡೆ ಕಾಣುವುದಿಲ್ಲವೇ ಎಂದು ಪ್ರತಿಕ್ರಿಯಿಸಿದ್ದಾರೆ.



