ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಬಂಡೆ ಸ್ಪೋಟ: ಓರ್ವ ಕಾರ್ಮಿಕ ಸಾವು

ತುಮಕೂರು: ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆಯಲ್ಲಿ ಬಂಡೆಯೊಂದು ಸ್ಪೋಟಗೊಂಡ ಪರಿಣಾಮ, ಓರ್ವ ಕಾರ್ಮಿಕ ಸಾವನ್ನಪ್ಪಿರುವಂತ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ತಿರುಮಣಿ ಸಮೀಪ ಸೋಲಾರ್ ಪಾರ್ಕ್ ನಿರ್ಮಿಸಲು ಬಂಡೆ ಸ್ಪೋಟಕ್ಕೆ ಕಾರ್ಮಿಕರು ತೊಡಗಿದ್ದರು. ಈ ವೇಳೆಯಲ್ಲಿ ಆಕಸ್ಮಿಕವಾಗಿ ಸ್ಪೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನನ್ನು ರಾಯಚೂರು ಮೂಲದ ಬಸವರಾಜ(46) ಎಂಬುದಾಗಿ ಗುರ್ತಿಸಲಾಗಿದೆ. ಮತ್ತೋರ್ವ ಕಾರ್ಮಿಕ ಶಿವಯ್ಯ ಎಂಬಾತ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂದಹಾಗೇ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಅಕ್ರಮವಾಗಿ ಸ್ಪೋಟಕ ಬಳಸಿ ಬಂಡೆ ಬ್ಲಾಸ್ಟ್ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಸ್ಪೋಟದಿಂದಾಗಿ ಸಮೀಪದ ಗುಡ್ಡಕ್ಕೂ ಬೆಂಕಿ ವ್ಯಾಪಿಸಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.