ಕಾರಕಾಸ್: ವೆನೆಜುವೆಲಾದ ಕರಾವಳಿ ತೀರದಲ್ಲಿ ಬುಧವಾರ ಸಂಜೆ ಭೀಕರ ಅವಳಿ (Back-to-back) ಭೂಕಂಪಗಳು ಸಂಭವಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಭೂಕಂಪನದ ಭೀಕರತೆಗೆ ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಧರೆಗುರುಳಿದ್ದು, ಗಾಬರಿಗೊಂಡ ನಿವಾಸಿಗಳು ಪ್ರಾಣಭಯದಿಂದ ಬೀದಿಗಿಳಿದು ಓಡಿದ್ದಾರೆ.
ಕೇವಲ ಒಂದು ನಿಮಿಷದ ಅಂತರದಲ್ಲಿ ನಡುಗಿದ ಭೂಮಿ
ರಿಕ್ಟರ್ ಮಾಪಕದಲ್ಲಿ ಭೀಕರ ತೀವ್ರತೆಯ 7.2 ಮತ್ತು 7.5ರಷ್ಟು ಪ್ರಬಲ ಭೂಕಂಪನಗಳು ಕರಾವಳಿ ತೀರದಲ್ಲಿ ದಾಖಲಾಗಿವೆ. ಅತ್ಯಂತ ಕಡಿಮೆ ಅವಧಿಯ ಅಂತರದಲ್ಲಿ ಬೆನ್ನುಬೆನ್ನಿಗೆ ಸಂಭವಿಸಿದ ಈ ಪ್ರಬಲ ಭೂಕಂಪಗಳು ಇಡೀ ವೆನೆಜುವೆಲಾ ದೇಶವನ್ನೇ ಬೆಚ್ಚಿಬೀಳಿಸಿವೆ. ರಾಜಧಾನಿ ಕಾರಕಾಸ್ನಲ್ಲಿ ಭೂಮಿಯ ಕಂಪನಕ್ಕೆ ಹಲವು ಪ್ರಮುಖ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು ಕುಸಿದು ಬಿದ್ದಿವೆ.
1,700 ಕಿಲೋಮೀಟರ್ ದೂರದ ಬ್ರೆಜಿಲ್ನಲ್ಲೂ ಕಂಪನ!
ಈ ಭೂಕಂಪಗಳ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಇದರ ಪ್ರಭಾವ ನೆರೆದೇಶಗಳ ಮೇಲೂ ಉಂಟಾಗಿದೆ. ವೆನೆಜುವೆಲಾದಿಂದ ಸುಮಾರು 1,700 ಕಿಲೋಮೀಟರ್ ದೂರದಲ್ಲಿರುವ ಬ್ರೆಜಿಲ್ನ ಅಮೆಜಾನ್ ಪ್ರದೇಶದ ನಗರಗಳಲ್ಲೂ ಭೂಮಿ ಪ್ರಬಲವಾಗಿ ಕಂಪಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ನಗರಗಳ ಪ್ರಮುಖ ಕಟ್ಟಡಗಳಲ್ಲಿದ್ದ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ಕಾರ್ಯ ಚುರುಕು
ದುರಂತ ಸಂಭವಿಸಿದ ಪ್ರದೇಶಗಳಲ್ಲಿ ಸದ್ಯ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಗಳು ಆರಂಭವಾಗಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಹೊರತೆಗೆಯಲು ತುರ್ತು ನಿರ್ವಹಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿನ ಸಂಖ್ಯೆ ಮತ್ತು ಗಾಯಗೊಂಡವರ ನಿಖರ ವಿವರಗಳಿಗಾಗಿ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.



