ಕೆನಡಾದ ವಾಲ್‌ಮಾರ್ಟ್ ಪಾರ್ಕಿಂಗ್‌ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ಯುವಕ, ಆತನ ಗೆಳತಿ ಬಲಿ | Canada

Shooting in a Walmart parking lot in Canada Young man of Indian origin and his girlfriend killed

ಕೆನಡಾ: ಕೆನಡಾದ(Canada) ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಗರದ ವಾಲ್‌ಮಾರ್ಟ್ (Walmart) ಮಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ಭಾರತೀಯ ಮೂಲದ 23 ವರ್ಷದ ಯುವಕ ಮತ್ತು ಆತನ 24 ವರ್ಷದ ಗೆಳತಿಯನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಸಂಘಟಿತ ಅಪರಾಧ ಜಾಲಕ್ಕೆ (Organised Crime) ಸಂಬಂಧಿಸಿದ ಪೂರ್ವನಿಯೋಜಿತ ದಾಳಿ ಎಂದು ಕೆನಡಾ(Canada) ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮೃತರನ್ನು ನೆರೆಯ ಡೆಲ್ಟಾ (Delta) ಪಟ್ಟಣದ ನಿವಾಸಿಗಳಾದ ಗಗನ್‌ಪ್ರೀತ್ ಅಲಿಯಾಸ್ ಗ್ಯಾರಿ ರೆಹಾಲ್ (23) ಮತ್ತು ಸುಖ್‌ಜೀತ್ ಕೌರ್ (24) ಎಂದು ಗುರುತಿಸಲಾಗಿದೆ. ನವೆಂಬರ್ 15ರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ನಡೆದಿದ್ದು ಹೇಗೆ?

ಸ್ಥಳೀಯ ಕಾಲಮಾನ ರಾತ್ರಿ 10:38ರ ಸುಮಾರಿಗೆ 88 ಅವೆನ್ಯೂ ಮತ್ತು 124 ಸ್ಟ್ರೀಟ್ ಬಳಿಯಿರುವ ವಾಲ್‌ಮಾರ್ಟ್ ಪಾರ್ಕಿಂಗ್ ಪ್ರದೇಶದಲ್ಲಿ ಯುವಕ ಮತ್ತು ಯುವತಿಗೆ ಗುಂಡೇಟು ಬಿದ್ದಿರುವ ಬಗ್ಗೆ ಪೊಲೀಸರು ಹಾಗೂ ತುರ್ತು ವೈದ್ಯಕೀಯ ಸಿಬ್ಬಂದಿಗೆ ಕರೆ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದರಾದರೂ, ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಸರ್ರೆ ಪೊಲೀಸ್ ಸೇವೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಘಟಿತ ಅಪರಾಧದ ಶಂಕೆ; ಸುಟ್ಟ ಸ್ಥಿತಿಯಲ್ಲಿ ಕಾರು ಪತ್ತೆ

ಪ್ರಕರಣದ ತನಿಖೆಯನ್ನು ಸಮಗ್ರ ನರಹತ್ಯೆ ತನಿಖಾ ತಂಡ (IHIT) ಕೈಗೆತ್ತಿಕೊಂಡಿದೆ. ಈ ಜೋಡಿ ಕೊಲೆಯು ಪೂರ್ವನಿಯೋಜಿತವಾಗಿದ್ದು, ಸಂಘಟಿತ ಅಪರಾಧದೊಂದಿಗೆ ನಂಟು ಹೊಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೃತ ಗಗನ್‌ಪ್ರೀತ್ ರೆಹಾಲ್ ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳಲ್ಲಿ ಪೊಲೀಸರಿಗೆ ಪರಿಚಿತನಾಗಿದ್ದರೆ, ಸುಖ್‌ಜೀತ್ ಕೌರ್ ಕೆನಡಾದಲ್ಲಿ ಸೀಮಿತ ಸಂಪರ್ಕಗಳನ್ನು ಹೊಂದಿದ್ದರು ಎಂದು ಐಎಚ್‌ಐಟಿ ಸಾರ್ಜೆಂಟ್ ಫ್ರೆಡಾ ಫಾಂಗ್ ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿ ನಡೆದ ಕೇವಲ 15 ನಿಮಿಷಗಳ ಬಳಿಕ ಅಂದರೆ ರಾತ್ರಿ 10:51ಕ್ಕೆ ಪ್ರಿನ್ಸೆಸ್ ಡ್ರೈವ್‌ನ 9700 ಬ್ಲಾಕ್‌ನಲ್ಲಿ ವಾಹನವೊಂದು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ತುರ್ತು ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿದೆ. ಹಂತಕರು ಕೃತ್ಯಕ್ಕೆ ಬಳಸಿದ ವಾಹನವನ್ನೇ ಸಾಕ್ಷ್ಯ ನಾಶಪಡಿಸಲು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಈ ಸುಟ್ಟ ಕಾರಿನ ಪತ್ತೆಯು ತನಿಖೆಗೆ ಮಹತ್ವದ ಸುಳಿವು ನೀಡಿದೆ.