ಇನ್ಮುಂದೆ ಇಟಲಿಯಲ್ಲಿರುವ ಸೋನಿಯಾ ಗಾಂಧಿ ಬಾಲ್ಯದ ಮನೆ ಮ್ಯೂಸಿಯಂ! Sonia Gandhi

From now on Sonia Gandhis childhood home in Italy will be a museum

ರೋಮ್: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ(Sonia Gandhi) ಅವರು ತಮ್ಮ ಬಾಲ್ಯವನ್ನು ಕಳೆದ ಇಟಲಿಯ ಪೂರ್ವಿಕರ ಮನೆಯು ಶೀಘ್ರದಲ್ಲೇ ವಸ್ತುಸಂಗ್ರಹಾಲಯವಾಗಿ (museum) ಮಾರ್ಪಡಲಿದೆ. ಭಾರತೀಯ ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ಸೋನಿಯಾ ಗಾಂಧಿ(Sonia Gandhi) ಅವರ ಆರಂಭಿಕ ಜೀವನದ ಕುರಿತು ಸಂದರ್ಶಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆ ರೂಪುಗೊಂಡಿದೆ.

ಇಟಲಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಖ್ ಉದ್ಯಮಿ ಸುಖ್‌ದೇವ್ ಸಿಂಗ್ ಕಾಂಗ್ (52) ಅವರ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಳ್ಳುತ್ತಿದೆ. 2020ರಲ್ಲಿ ಈ ಮನೆಯನ್ನು ಖರೀದಿಸಿರುವ ಕಾಂಗ್, ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಸಂಬಂಧಿಸಿದ ಫೋಟೋಗಳು, ಸ್ಮರಣಿಕೆಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಒಳಗೊಂಡ ವಸ್ತುಸಂಗ್ರಹಾಲಯವನ್ನಾಗಿ ಇದನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ವಿಶೇಷವಾಗಿ ಇಟಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಇದೊಂದು ಪ್ರಮುಖ ಪ್ರವಾಸಿ ತಾಣವಾಗಬೇಕು ಎಂಬುದು ಅವರ ಆಶಯವಾಗಿದೆ.

ಇಟಲಿಯಲ್ಲಿರುವ ಸೋನಿಯಾ ಗಾಂಧಿ ಬಾಲ್ಯದ ಮನೆಯ ವಿಶೇಷತೆ

ಇಟಲಿಯ ವಿಸೆನ್ಜಾ (Vicenza) ಪ್ರಾಂತ್ಯದ ಲುಸಿಯಾನಾ (Lusiana) ಪಟ್ಟಣದಲ್ಲಿ ಈ ಮನೆಯಿದ್ದು, ಕಾಂಗ್ ವಾಸವಿರುವ ಬ್ರೆಸಿಯಾದಿಂದ ಸುಮಾರು ಒಂದು ಗಂಟೆಯ ಪ್ರಯಾಣದ ದೂರದಲ್ಲಿದೆ. ಬೂದು ಬಣ್ಣದ ಕಲ್ಲು ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಲಾದ ಆರು ಬೆಡ್‌ರೂಮ್‌ಗಳ ಈ ಮನೆಯಲ್ಲಿ 1946ರ ಡಿಸೆಂಬರ್ 9ರಂದು ಸೋನಿಯಾ ಗಾಂಧಿ ಜನಿಸಿದ್ದರು ಹಾಗೂ ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದರು.

ಸದ್ಯ ಈ ಮನೆಯನ್ನು ‘ಇಂಡಿಯನ್ ಹೌಸ್’ (Indian House) ಎಂದು ಕರೆಯಲಾಗುತ್ತಿದ್ದು, ಮನೆಯ ಹೊರಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಇದು ಸೋನಿಯಾ ಗಾಂಧಿ ಅವರ ಜನ್ಮಸ್ಥಳ ಎಂಬ ನಾಮಫಲಕವನ್ನೂ ಅಳವಡಿಸಲಾಗಿದೆ. 2020ರಲ್ಲಿ ತಮ್ಮ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಈ ಆಸ್ತಿಯನ್ನು ಖರೀದಿಸಿರುವ ಕಾಂಗ್, ಮನೆಯ ನಿರ್ವಹಣೆ ಮತ್ತು ತೆರಿಗೆಗಾಗಿ ವಾರ್ಷಿಕ ಸುಮಾರು 1,000 ಯುರೋಗಳನ್ನು ವ್ಯಯಿಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನೂ ನೇಮಿಸಲಾಗಿದೆ.

ಪಂಜಾಬ್‌ನಿಂದ ಇಟಲಿಗೆ ವಲಸೆ ಹೋಗಿ ಮನೆ ಖರೀದಿಸಿದ ಕಥೆ

ಮೂಲತಃ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಗ್ರಾಮವೊಂದರವರಾದ ಸುಖ್‌ದೇವ್ ಸಿಂಗ್ ಕಾಂಗ್, 1992ರಲ್ಲಿ ಇಟಲಿಗೆ ವಲಸೆ ಹೋಗಿ ಕಳೆದ ಮೂರು ದಶಕಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಆರಂಭದಲ್ಲಿ ಹೈನುಗಾರಿಕೆ, ಕೃಷಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಹಂತ ಹಂತವಾಗಿ ಉದ್ಯಮಿಯಾಗಿ ಬೆಳೆದರು.

ಸೋನಿಯಾ ಗಾಂಧಿ ಅವರ ಬಾಲ್ಯದ ಮನೆ ಮಾರಾಟಕ್ಕಿರುವ ವಿಚಾರ ತಿಳಿದಾಗ, ಆ ಆಸ್ತಿಯನ್ನು ಭಾರತೀಯರೇ, ಅದರಲ್ಲೂ ವಿಶೇಷವಾಗಿ ಸಿಖ್ ಕುಟುಂಬವೊಂದು ಖರೀದಿಸಬೇಕೆಂಬ ಆಸಕ್ತಿ ಇರುವುದಾಗಿ ಇಟಲಿಯ ಕೆಲ ಪರಿಚಯಸ್ಥರು ಕಾಂಗ್ ಅವರಿಗೆ ತಿಳಿಸಿದ್ದರು. ಗಾಂಧಿ ಕುಟುಂಬದ ಅಭಿಮಾನಿಯಾಗಿರುವ ಕಾಂಗ್, ವಾಣಿಜ್ಯ ಉದ್ದೇಶಕ್ಕೆ ಬಳಸದೆ ಅದರ ಐತಿಹಾಸಿಕ ಮಹತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಮನೆಯನ್ನು ಖರೀದಿಸಿದರು. ಈ ಮನೆಯನ್ನು ಬಾಡಿಗೆಗೆ ನೀಡಲು ಅಥವಾ ಗುರುದ್ವಾರವಾಗಿ ಪರಿವರ್ತಿಸಲು ಹಲವು ಪ್ರಸ್ತಾಪಗಳು ಬಂದಿದ್ದರೂ, ಸೋನಿಯಾ ಗಾಂಧಿ ಮತ್ತು ಮೈನೋ (Maino) ಕುಟುಂಬದ ಇತಿಹಾಸವನ್ನು ಸಂರಕ್ಷಿಸುವ ಉದ್ದೇಶದಿಂದ ಅವರು ಆ ಎಲ್ಲಾ ಪ್ರಸ್ತಾಪಗಳನ್ನು ನಿರಾಕರಿಸಿದ್ದರು.

ಸೋನಿಯಾ, ರಾಹುಲ್, ಪ್ರಿಯಾಂಕಾ ಭೇಟಿಗೆ ಕಾಂಗ್ ಕಾತರ

ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದರೂ, ಅದನ್ನು ಪೂರ್ಣ ಪ್ರಮಾಣದ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಗಾಂಧಿ ಕುಟುಂಬದ ಸಹಕಾರ ಅತ್ಯಗತ್ಯ ಎಂದು ಕಾಂಗ್ ಭಾವಿಸಿದ್ದಾರೆ. ಮ್ಯೂಸಿಯಂನಲ್ಲಿ ಇರಿಸಲು ಸೋನಿಯಾ ಗಾಂಧಿ ಅವರ ಬಾಲ್ಯದ ಫೋಟೋಗಳು, ದಾಖಲೆಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಒದಗಿಸುವಂತೆ ಕೋರಲು ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದಾರೆ. ಕುಟುಂಬದ ವೈಯಕ್ತಿಕ ಸಂಗ್ರಹಗಳ ಕೊರತೆಯಿಂದಾಗಿ ಯೋಜನೆ ಸ್ವಲ್ಪ ವಿಳಂಬವಾಗಿದ್ದು, ಆದಷ್ಟು ಬೇಗ ಇದನ್ನು ಪೂರ್ಣಗೊಳಿಸುವ ಉತ್ಸಾಹದಲ್ಲಿದ್ದಾರೆ.

ಆತ್ಮಚರಿತ್ರೆಯಿಂದ ಹೆಚ್ಚಿದ ಕುತೂಹಲ

ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಬಿಡುಗಡೆಯಾದ ಬಳಿಕ, ಇಟಲಿಯಲ್ಲಿನ ಅವರ ಬಾಲ್ಯ ಮತ್ತು ಆರಂಭಿಕ ಜೀವನದ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ತಾವೂ ಈ ಪುಸ್ತಕವನ್ನು ಓದಲು ಕಾತರರಾಗಿರುವುದಾಗಿ ತಿಳಿಸಿರುವ ಕಾಂಗ್, ಸೋನಿಯಾ ಗಾಂಧಿ ಅವರು ಭಾರತದ ಪ್ರಧಾನಿಗಳ ಕುಟುಂಬದ ಸೊಸೆಯಾಗುತ್ತೇನೆ ಎಂದು ಹೇಗೆ ಊಹಿಸಿರಲಿಲ್ಲವೋ, ಹಾಗೆಯೇ ತಾವೂ ಸಹ ಒಂದು ದಿನ ಸೋನಿಯಾ ಗಾಂಧಿ ಹುಟ್ಟಿದ ಮನೆಯ ಮಾಲೀಕನಾಗುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.