ಮೊಬೈಲ್ ಸೇವೆಯಲ್ಲಿ ದಿಢೀರ್ ಬದಲಾವಣೆ: ಡೇಟಾ ಬೇಡದವರಿಗೆ ಅಗ್ಗದ ಕರೆ–ಎಸ್‌ಎಂಎಸ್‌ ರೀಚಾರ್ಜ್ ಆಯ್ಕೆ ವ್ಯವಸ್ಥೆಗೆ TRAI ಆದೇಶ

ನವದೆಹಲಿ: ಟೆಲಿಕಾಂ ಗ್ರಾಹಕರಿಗೆ ವಾಯ್ಸ್‌ ಮತ್ತು ಎಸ್‌ಎಂಎಸ್‌ ಸೇವೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ‘ಟೆಲಿಕಾಂ ಗ್ರಾಹಕ ಸಂರಕ್ಷಣಾ (13ನೇ ತಿದ್ದುಪಡಿ) ನಿಯಮಾವಳಿ, 2026’ ಅನ್ನು ಪ್ರಕಟಿಸಿದೆ.

ಹೊಸ ನಿಯಮದಡಿ ಡೇಟಾ ಸೇವೆ ಅಗತ್ಯವಿಲ್ಲದ ಗ್ರಾಹಕರಿಗಾಗಿ ವಾಯ್ಸ್‌ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡಿರುವ ವಿಶೇಷ ಟ್ಯಾರಿಫ್ ವೋಚರ್‌ಗಳನ್ನು (STV) ಟೆಲಿಕಾಂ ಕಂಪನಿಗಳು ಸೂಕ್ತ ದರ ಕಡಿತದೊಂದಿಗೆ ನೀಡುವುದು ಕಡ್ಡಾಯವಾಗಲಿದೆ.

30 ದಿನಕ್ಕಿಂತ ಕಡಿಮೆ ಅವಧಿಗೂ STV

2024ರ 12ನೇ ತಿದ್ದುಪಡಿ ನಿಯಮಾವಳಿ ಜಾರಿಯಾದ ಬಳಿಕ, ವಾಯ್ಸ್‌ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡ STVಗಳ ಸಂಖ್ಯೆ ಸೀಮಿತವಾಗಿದ್ದು, ಬಹುತೇಕ ದೀರ್ಘಾವಧಿಯ ಪ್ಲ್ಯಾನ್‌ಗಳೇ ಲಭ್ಯವಿದ್ದವು ಎಂದು TRAI ಗಮನಿಸಿತ್ತು.

ಇದರಿಂದ ಕಡಿಮೆ ಆದಾಯದ ಗ್ರಾಹಕರಿಗೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಡಿಮೆ ಅವಧಿಯ ರೀಚಾರ್ಜ್ ಆಯ್ಕೆ ಸಿಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ TRAI ತಿದ್ದುಪಡಿ ನಿಯಮಾವಳಿಯ ಕರಡು ಬಿಡುಗಡೆ ಮಾಡಿತ್ತು.

ಪ್ರತಿ ತಿಂಗಳು ಒಂದೇ ದಿನ ನವೀಕರಣ

  • ಹೊಸ ನಿಯಮದ ಪ್ರಕಾರ, ವಾಯ್ಸ್‌, ಎಸ್‌ಎಂಎಸ್‌ ಮತ್ತು ಡೇಟಾ ಒಳಗೊಂಡ STVಗಳಿಗೆ ನೀಡಲಾಗುವ 30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪ್ರತಿ ಮಾನ್ಯತಾ ಅವಧಿಗೆ ಅನುಗುಣವಾಗಿ ವಾಯ್ಸ್‌ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡ STV ಒದಗಿಸಬೇಕು.
  • ಅಲ್ಲದೆ, ಪ್ರತಿ ತಿಂಗಳು ಒಂದೇ ದಿನ ನವೀಕರಿಸಬಹುದಾದ ಮಾನ್ಯತೆಯ STV ಇರಬೇಕು. ನಿಗದಿತ ದಿನಾಂಕ ಆ ತಿಂಗಳಲ್ಲಿ ಲಭ್ಯವಿಲ್ಲದಿದ್ದರೆ, ಆ ತಿಂಗಳ ಕೊನೆಯ ದಿನವನ್ನು ನವೀಕರಣ ದಿನಾಂಕವಾಗಿ ಪರಿಗಣಿಸಲಾಗುತ್ತದೆ.

ಇದರ ಜತೆಗೆ ಮೇಲಿನ ಅವಧಿಗಳಿಗಿಂತ ಹೆಚ್ಚಿನ ಮಾನ್ಯತೆಯ ಕನಿಷ್ಠ ಒಂದು ವಾಯ್ಸ್‌–SMS STVಯನ್ನೂ ಒದಗಿಸಬೇಕಾಗುತ್ತದೆ.

ತಿದ್ದುಪಡಿ ಕರಡು ಕುರಿತು TRAI ಏಪ್ರಿಲ್ 7, 2026ರಂದು ಸಾರ್ವಜನಿಕ ಸಮಾಲೋಚನೆ ನಡೆಸಿತ್ತು. ವಿವಿಧ ಪಾಲುದಾರರಿಂದ ಒಟ್ಟು 1,132 ಪ್ರತಿಕ್ರಿಯೆಗಳು ಸ್ವೀಕರಿಸಿದ್ದು, ಜೂನ್ 15ರಂದು ಮುಕ್ತ ಸಭೆಯನ್ನೂ ನಡೆಸಲಾಗಿತ್ತು. ಪಾಲುದಾರರಿಂದ ಬಂದ ಅಭಿಪ್ರಾಯಗಳು ಹಾಗೂ ತನ್ನದೇ ವಿಶ್ಲೇಷಣೆಯ ಆಧಾರದ ಮೇಲೆ ಅಂತಿಮ ನಿಯಮಾವಳಿಯನ್ನು TRAI ಪ್ರಕಟಿಸಿದೆ.

ಹೊಸ ವ್ಯವಸ್ಥೆಯಿಂದ ಡೇಟಾ ಬಳಸದ ಗ್ರಾಹಕರು ತಮ್ಮ ಅಗತ್ಯ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ರೀಚಾರ್ಜ್ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದು TRAI ತಿಳಿಸಿದೆ.