ರಾಂಚಿ: ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ಎಂ.ಎಸ್ ಧೋನಿ(MS Dhoni), ಇದೀಗ ತಮ್ಮ ಐಪಿಎಲ್ ಆಟಗಾರನ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಮುಂಬರುವ 2027ರ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ‘ಮೆಂಟರ್’ (ಮಾರ್ಗದರ್ಶಕ) ಆಗಿ ನೇಮಕಗೊಳ್ಳುವ ಮೂಲಕ ಧೋನಿ(MS Dhoni) ತಮ್ಮ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಆದರೆ, ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿಯವರ ಜೀವನದಲ್ಲಿ ಇಂದಿಗೂ ಪೂರ್ಣಗೊಳ್ಳದ ಒಂದು ಆಸಕ್ತಿದಾಯಕ ಅಧ್ಯಾಯವಿದೆ. ಅದುವೇ ಅವರ ‘ಕಾಲೇಜು ಪದವಿ’.
ಒತ್ತಡದ ಸನ್ನಿವೇಶಗಳಲ್ಲಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ‘ಬೆಸ್ಟ್ ಫಿನಿಶರ್’ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿಗೆ(Mahendra Singh Dhoni), ತಮ್ಮ ಪದವಿ ಶಿಕ್ಷಣವನ್ನು ಮಾತ್ರ ಪೂರ್ಣಗೊಳಿಸಲು (ಫಿನಿಶ್ ಮಾಡಲು) ಸಾಧ್ಯವಾಗಲಿಲ್ಲ ಎಂಬುದು ವಿಶೇಷ.
ಕಾಲೇಜು ಡ್ರಾಪ್-ಔಟ್ನಿಂದ ಟೀಮ್ ಇಂಡಿಯಾ ನಾಯಕತ್ವದವರೆಗೆ:
1999ರಲ್ಲಿ ರಾಂಚಿಯ ಡಿಎವಿ ಜವಾಹರ್ ವಿದ್ಯಾ ಮಂದಿರದಲ್ಲಿ 12ನೇ ತರಗತಿ ಪೂರ್ಣಗೊಳಿಸಿದ ಧೋನಿ, ಬಳಿಕ ಬಿ.ಕಾಂ (B.Com) ಪದವಿಗಾಗಿ ಗೋಸ್ನರ್ ಕಾಲೇಜಿಗೆ ಸೇರಿದರು. ಆದರೆ, ಕ್ರಿಕೆಟ್ ಮೇಲಿನ ಅತಿಯಾದ ಒಲವಿನಿಂದಾಗಿ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಧೋನಿ, 2007ರಲ್ಲಿ ಭಾರತ ಏಕದಿನ ತಂಡದ ನಾಯಕರಾದರು ಮತ್ತು ಅದೇ ವರ್ಷ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಡುವ ಮೂಲಕ ಇತಿಹಾಸ ನಿರ್ಮಿಸಿದರು.
ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮತ್ತೆ ಕಾಲೇಜಿಗೆ ಪ್ರವೇಶ:
ಭಾರತ ತಂಡದ ನಾಯಕರಾಗಿ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಧೋನಿ ತಮ್ಮ ಪದವಿ ಪೂರ್ಣಗೊಳಿಸುವ ಆಸೆಯನ್ನು ಕೈಬಿಟ್ಟಿರಲಿಲ್ಲ. 2008ರ ಮಾರ್ಚ್ನಲ್ಲಿ ರಾಂಚಿಯ ಸೇಂಟ್ ಕ್ಸೇವಿಯರ್ ಕಾಲೇಜಿನ ಅಂದಿನ ಪ್ರಾಂಶುಪಾಲ ನಿಕೋಲಸ್ ಟೆಟೆ ಅವರನ್ನು ಭೇಟಿಯಾದ ಧೋನಿ, ಬಿ.ಕಾಂ ಪೂರ್ಣಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಅದರಂತೆ, 2008ರ ಸೆಪ್ಟೆಂಬರ್ನಲ್ಲಿ ಅವರು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ‘ಆಫೀಸ್ ಮ್ಯಾನೇಜ್ಮೆಂಟ್ ಮತ್ತು ಸೆಕ್ರೆಟರಿಯಲ್ ಪ್ರಾಕ್ಟೀಸಸ್’ ವಿಷಯದಲ್ಲಿ ಮೂರು ವರ್ಷಗಳ ವೃತ್ತಿಪರ ಬಿ.ಕಾಂ (Vocational BCom) ಕೋರ್ಸ್ಗೆ ದಾಖಲಾದರು. ಕಾಲೇಜಿನ ‘ವಿಶೇಷ ಕ್ರೀಡಾಪಟುಗಳ ಯೋಜನೆ’ಯಡಿ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿತ್ತು. ಜೊತೆಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಮತ್ತು ವಿಶೇಷ ಪರೀಕ್ಷಾ ವ್ಯವಸ್ಥೆ ಮಾಡುವ ಭರವಸೆಯನ್ನೂ ಕಾಲೇಜು ನೀಡಿತ್ತು. ಆದರೆ, ಅವರು ಪರೀಕ್ಷೆಗಳನ್ನು ಬರೆದು ಪಾಸಾಗುವುದು ಕಡ್ಡಾಯವಾಗಿತ್ತು.
ಆರು ಸೆಮಿಸ್ಟರ್ಗಳು, ಆದರೆ ಪದವಿ ಸಿಗಲಿಲ್ಲ:
ಧೋನಿಯವರ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಮತ್ತು ಕಾಲೇಜು ಪರೀಕ್ಷೆಗಳ ವೇಳಾಪಟ್ಟಿ ಒಂದೇ ಸಮಯಕ್ಕೆ ಬರುತ್ತಿದ್ದುದು ದೊಡ್ಡ ಅಡ್ಡಿಯಾಯಿತು. ಭದ್ರತೆ ಮತ್ತು ಪ್ರಯಾಣದ ಸಮಸ್ಯೆಗಳನ್ನು ತಪ್ಪಿಸಲು, ದೇಶಾದ್ಯಂತ ಇರುವ ಜೆಸ್ಯೂಟ್ (Jesuit) ಸಂಸ್ಥೆಗಳ ಯಾವುದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನೂ ಸೇಂಟ್ ಕ್ಸೇವಿಯರ್ ಕಾಲೇಜು ನೀಡಿತ್ತು.
ಆದರೆ, ಈ ಯಾವ ಸೌಲಭ್ಯಗಳೂ ಅವರಿಗೆ ಪದವಿ ಪ್ರಮಾಣಪತ್ರವನ್ನು ತಂದುಕೊಡಲಿಲ್ಲ. 2013ರ ಫೆಬ್ರವರಿ ವೇಳೆಗೆ ಅವರ ಕೋರ್ಸ್ನ ಐದು ವರ್ಷಗಳ ನೋಂದಣಿ ಅವಧಿ ಮುಕ್ತಾಯಗೊಂಡಿತು. ಅಷ್ಟರೊಳಗೆ ಧೋನಿ ಆರು ಸೆಮಿಸ್ಟರ್ಗಳಲ್ಲಿ ಒಂದೇ ಒಂದು ಪರೀಕ್ಷೆಯನ್ನೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬೇಕಿದ್ದರೆ ಮತ್ತೆ ಮರು-ನೋಂದಣಿ (Re-register) ಮಾಡಿಕೊಳ್ಳಬಹುದು ಎಂದು ಕಾಲೇಜು ತಿಳಿಸಿತ್ತಾದರೂ, ಧೋನಿ ಮತ್ತೆ ಕಾಲೇಜಿನತ್ತ ಮುಖ ಮಾಡಲಿಲ್ಲ.
ಒಂದೆಡೆ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಧೋನಿ ಕ್ರಿಕೆಟ್ ಲೋಕದ ಸಾಮ್ರಾಟನಾಗಿ ಮೆರೆದರೆ, ಮತ್ತೊಂದೆಡೆ ಅವರ ಕಾಲೇಜು ಪದವಿ ಕನಸು ಕನಸಾಗಿಯೇ ಉಳಿಯಿತು. ವಿಶ್ವಕಪ್ ಗೆದ್ದ ನಾಯಕನಿಗೂ ಪರೀಕ್ಷೆ ಬರೆಯಲು ಸಮಯ ಸಿಗಲಿಲ್ಲ ಎಂಬುದು ಅವರ ಜೀವನದ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ.



