ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ‘ಕನ್ನಡ ಚಿಂತನೆ-ಕರ್ನಾಟಕದ ಇತಿಹಾಸ ಮತ್ತು ಪರಂಪರೆ’ ಕುರಿತು ಚಿಂತನಾ ಸಭೆ ನಡೆಯಿತು.
ಹಿರಿಯ ಸಾಹಿತಿ ಡಾ. ಎಂ.ಎಸ್. ಆಶಾದೇವಿ ಮಾತನಾಡಿ, 8ನೇ ಶತಮಾನದಲ್ಲೇ ಕವಿರಾಜಮಾರ್ಗ ಸಹಿಷ್ಣುತೆ ಮತ್ತು ಸಮುದಾಯ ನಿರ್ಮಾಣದ ಮಹತ್ವ ಸಾರಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ ವ್ಯವಸ್ಥೆ ವಿರೋಧಿಸಿ, ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮೂಲಕ ಕ್ರಾಂತಿ ತಂದರು. ಬಸವಣ್ಣನವರು ಎಲ್ಲ ಜಾತಿಯವರನ್ನು ಒಂದೇ ವೇದಿಕೆಗೆ ತಂದರು. ಇಂದಿಗೂ ಜಾತಿ ಲೆಕ್ಕಾಚಾರ ಮುಂದುವರಿದಿರುವುದು ವಿಷಾದನೀಯ. ಕರ್ನಾಟಕದ ಇತಿಹಾಸವನ್ನು ಅರಮನೆಗಳಿಂದಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು ಎಂದರು.

ವ.ಚ. ಚನ್ನೇಗೌಡ ಮಾತನಾಡಿ, ನಾಡು, ನುಡಿ, ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಸಮಿತಿಯ ಅಧ್ಯಕ್ಷ ಹುಸೇನ್ ಕೆ.ಎಸ್.ಎಂ. ಸೇರಿದಂತೆ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.



