ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ(rural roads) ದುಸ್ಥಿತಿಯನ್ನು ಹೋಗಲಾಡಿಸಿ, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಬರೋಬ್ಬರಿ 16,000 ಕೋಟಿ ರೂಪಾಯಿಗಳ ಮೆಗಾ ಅನುದಾನವನ್ನು ಘೋಷಿಸಿದೆ. ಆ ಮೂಲಕ ಗ್ರಾಮೀಣ ರಸ್ತೆಗಳ(rural roads) ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯನ್ನು ಸರ್ಕಾರ ಇರಿಸಿದೆ.
‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ಯಡಿ 10,000 ಕೋಟಿ ರೂ. ಹಾಗೂ ‘ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆ’ಯಡಿ 6,000 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸೆಪ್ಟೆಂಬರ್ 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದ ಅನ್ವಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಉಪ ಕಾರ್ಯದರ್ಶಿ ಕೆ.ಸಿ. ದೇವರಾಜೇಗೌಡ ಅವರು ನವೆಂಬರ್ 16 ಮತ್ತು 17ರಂದು ಪ್ರತ್ಯೇಕ ಮಾರ್ಗಸೂಚಿ ಸಹಿತ ಸರ್ಕಾರಿ ಆದೇಶಗಳನ್ನು ಹೊರಡಿಸಿದ್ದಾರೆ.
ಗ್ರಾಮೀಣ ರಸ್ತೆಗಳ ಪುನಶ್ಚೇತನಕ್ಕೆ ₹10,000 ಕೋಟಿ ಅನುದಾನ
ರಾಜ್ಯದಲ್ಲಿರುವ ಸುಮಾರು 1,99,458.72 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಪೈಕಿ, ಈ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY-I ಮತ್ತು II) ಹಾಗೂ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗಳಡಿ ನಿರ್ಮಿಸಿದ್ದ ಹಳೆಯ ಡಾಂಬರು ರಸ್ತೆಗಳ ವಿನ್ಯಾಸದ ಅವಧಿ (12 ರಿಂದ 24 ವರ್ಷ) ಮುಕ್ತಾಯಗೊಂಡಿದೆ. ಮಳೆ ಹಾಗೂ ಹೆಚ್ಚಿದ ವಾಹನ ಸಂಚಾರದಿಂದ ಹಾಳಾಗಿರುವ ಇಂತಹ ರಸ್ತೆಗಳನ್ನು ನವೀಕರಿಸಲು 10,000 ಕೋಟಿ ರೂ. ವೆಚ್ಚದ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಜಾರಿಯಾಗುತ್ತಿದೆ. ಈ ಅನುದಾನದಲ್ಲಿ ತೀರಾ ಹದಗೆಟ್ಟಿರುವ ಡಾಂಬರು ರಸ್ತೆಗಳ ದುರಸ್ತಿಗೆ 7,000 ಕೋಟಿ ರೂ. ಹಾಗೂ ಪ್ರಮುಖ ರಸ್ತೆಗಳ ಮರು-ಡಾಂಬರೀಕರಣಕ್ಕೆ (Re-Surfacing) 3,000 ಕೋಟಿ ರೂ. ಬಳಸಲಾಗುವುದು. ಮೊದಲ ಹಂತದಲ್ಲಿ 31 ಜಿಲ್ಲೆಗಳಿಗೆ 7,775 ಕೋಟಿ ರೂ. ಹಂಚಿಕೆಯಾಗಿದ್ದು, ಬೆಳಗಾವಿ ಜಿಲ್ಲೆಗೆ ಗರಿಷ್ಠ 650 ಕೋಟಿ ರೂ. ಹಾಗೂ ತುಮಕೂರಿಗೆ 425 ಕೋಟಿ ರೂ. ಲಭಿಸಿದೆ.
ಹಳ್ಳಿಗಳ ಒಳರಸ್ತೆ, ಚರಂಡಿ ನಿರ್ಮಾಣಕ್ಕೆ ₹6,000 ಕೋಟಿ
ಇನ್ನೊಂದೆಡೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮ ಠಾಣಾ ಮತ್ತು ವಿಸ್ತರಿತ ಬಡಾವಣೆಗಳ ಒಳರಸ್ತೆಗಳನ್ನು ಅಭಿವೃದ್ಧಿಪಡಿಸಲು ‘ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆ’ಯಡಿ 6,000 ಕೋಟಿ ರೂ. ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ಕನಿಷ್ಠ 20 ವರ್ಷ ಬಾಳಿಕೆ ಬರುವ ಕಾಂಕ್ರೀಟ್ (ಸಿಸಿ) ರಸ್ತೆ ಮತ್ತು ಚರಂಡಿ ನಿರ್ಮಾಣ, ಡಿಆರ್‌ಆರ್‌ಪಿ ನಕ್ಷೆಯಲ್ಲಿಲ್ಲದ ಕನಿಷ್ಠ 6 ಮೀಟರ್ ಅಗಲದ ಹೊಸ ಮಣ್ಣು/ಜಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಕೊಳವೆ ಬಾವಿ ಮತ್ತು ಪೈಪ್‌ಲೈನ್ ವಿಸ್ತರಣೆ ಕಾಮಗಾರಿಗಳನ್ನು ನಡೆಸಬಹುದು. ಹೊಸದಾಗಿ ಸಿಸಿ ರಸ್ತೆ ನಿರ್ಮಿಸಿದ ನಂತರ ಪೈಪ್‌ಲೈನ್‌ಗಾಗಿ ಮತ್ತೆ ರಸ್ತೆ ಅಗೆಯುವುದನ್ನು ತಪ್ಪಿಸಲು, ಮೊದಲೇ ಚರಂಡಿಯ ಪಕ್ಕದಲ್ಲಿ ಕುಡಿಯುವ ನೀರಿನ ಮುಖ್ಯ ಕೊಳವೆಯನ್ನು ಅಳವಡಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ 31 ಜಿಲ್ಲೆಗಳಿಗೆ 4,904.50 ಕೋಟಿ ರೂ. ಹಂಚಿಕೆಯಾಗಿದ್ದು, ಬೆಳಗಾವಿಗೆ 399.50 ಕೋಟಿ ರೂ. ಹಾಗೂ ತುಮಕೂರಿಗೆ 277.50 ಕೋಟಿ ರೂ. ದೊರೆತಿದೆ.
ಕಾಮಗಾರಿ ಆಯ್ಕೆ ನಿಯಮ ಮತ್ತು 15 ತಿಂಗಳ ಗಡುವು
ಈ ಎರಡೂ ಯೋಜನೆಗಳಡಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಒಪ್ಪಿಗೆಯೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು. ಹೆಚ್ಚಿನ ಜನಸಂಖ್ಯೆ ಇರುವ ಭಾಗಗಳು, ಕೃಷಿ ಮಾರುಕಟ್ಟೆ, ಶಾಲೆ, ಆಸ್ಪತ್ರೆ ಸಂಪರ್ಕಿಸುವ ರಸ್ತೆಗಳು, ಹೊಸ ಜನವಸತಿ ಪ್ರದೇಶಗಳು ಹಾಗೂ ನ್ಯಾಯಾಲಯ ಅಥವಾ ಲೋಕಾಯುಕ್ತದಲ್ಲಿ ಬಾಕಿಯಿರುವ ಕಾಮಗಾರಿಗಳಿಗೆ ಮೊದಲ ಆದ್ಯತೆ ಸಿಗಲಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ನಿಯಮಾನುಸಾರ ಅನುದಾನ ಮೀಸಲಿಡುವುದು ಕಡ್ಡಾಯವಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಅವರು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ಕೂಡಲೇ ರಾಜ್ಯ ಮಟ್ಟದ ಸಮಿತಿಯ ಒಪ್ಪಿಗೆಗೆ ಕಾಯದೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅವಕಾಶ ನೀಡಲಾಗಿದೆ. ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕವಾಗಿ ಟೆಂಡರ್ ನಡೆಸಿ, 15 ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಲು ಕಾಮಗಾರಿಯ ಆರಂಭ ಮತ್ತು ಮುಕ್ತಾಯದ ಜಿಪಿಎಸ್ ಫೋಟೋ, ವೀಡಿಯೋ ಚಿತ್ರೀಕರಣ ಹಾಗೂ ಎನ್‌ಜಿಎಸ್‌ಕೆ ತಂತ್ರಾಂಶದಲ್ಲಿ ಪ್ರಗತಿ ದಾಖಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ




